ತಪ್ಪು ಮಾಹಿತಿ ನೀಡಿ ಪಡೆದರೆ ನಿವೇಶನ ರದ್ದು: ಸಚಿವ ದರ್ಶನಾಪೂರ

KannadaprabhaNewsNetwork |  
Published : Dec 21, 2023, 01:15 AM IST
ಶಹಾಪುರ ನಗರದ ನಗರಸಭೆಯಲ್ಲಿ ನಡೆದ ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಅವರಿಗೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಶಹಾಪುರ ನಗರಸಭೆ ವತಿಯಿಂದ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಅರ್ಜಿ ಕರೆಯಲಾಗಿತ್ತು, ಈ ವೇಳೆ ನಗರದ ಸುಮಾರು 3500 ಅರ್ಜಿಗಳು ಸ್ವೀಕೃತಿಯಾಗಿದ್ದವು. ಆಶ್ರಯ ಸಮಿತಿ ಹಾಗೂ ನಗರಸಭೆ ವತಿಯಿಂದ ಮನೆ ಮನೆ ಸರ್ವೇ ಮಾಡಿ ನಿಜವಾದ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿತ್ತು. ಇದಕ್ಕೆ ವಿಪಕ್ಷಗಳು ಆಕ್ಷೇಪಿಸಿ ನಗರಸಭೆ ಮುಂದೆ ಧರಣಿ ಮಾಡಿದ ನಂತರ ಕೋರ್ಟಿನಲ್ಲಿ ಸ್ಟೇ ತರಲಾಗಿತ್ತು. ಈಗ ಎಲ್ಲವೂ ಬಗೆಹರಿದಿವೆ. ಆದಷ್ಟು ಬೇಗ ನಿವೇಶನಗಳನ್ನು ಪಾರದರ್ಶಕವಾಗಿ ಲಾಟರಿ ಮೂಲಕ ಹಂಚಲಾಗುವುದು ಎಂದು ಸಚಿವ ದರ್ಶನಾಪೂರ ಮಾಹಿತಿ

ಕನ್ನಡಪ್ರಭ ವಾರ್ತೆ ಶಹಾಪುರ

ನಗರ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವ ಮೂಲಕ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ನಿವೇಶನ ಹಂಚಿಕೆ ಮಾಡಲಾಗುತ್ತಿದೆ. ಒಂದು ವೇಳೆ ತಪ್ಪು ಮಾಹಿತಿ ನೀಡಿ, ನಿವೇಶನ ಇರುವುದನ್ನು ಮುಚ್ಚಿಟ್ಟು ಸರಕಾರದಿಂದ ನಿವೇಶನ ಪಡೆದಿರುವುದು ಪತ್ತೆಯಾದರೆ, ಅಂಥವರ ನಿವೇಶನಗಳನ್ನು ತಕ್ಷಣ ರದ್ದುಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಫಲಾನುಭವಿಗಳಿಗೆ ಸೂಚನೆ ನೀಡಿದರು.

ನಗರದ ನಗರಸಭೆ ಆವರಣದಲ್ಲಿ ನಡೆದ ಹೊಲಿಗೆ ಯಂತ್ರ ಹಾಗೂ ಬ್ಯೂಟಿಷಿಯನ್ ತರಬೇತಿ ಪ್ರಮಾಣ ಪತ್ರ ಮತ್ತು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆದ ಅಲೆಮಾರಿ, ಅರೆ ಅಲೆಮಾರಿ ಸಮುದಾಯ ಅವರಿಗೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ನಗರಸಭೆ ವತಿಯಿಂದ ವಸತಿ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಅರ್ಜಿ ಕರೆಯಲಾಗಿತ್ತು, ಈ ವೇಳೆ ನಗರದ ಸುಮಾರು 3500 ಅರ್ಜಿಗಳು ಸ್ವೀಕೃತಿಯಾಗಿದ್ದವು. ಆಶ್ರಯ ಸಮಿತಿ ಹಾಗೂ ನಗರಸಭೆ ವತಿಯಿಂದ ಮನೆ ಮನೆ ಸರ್ವೇ ಮಾಡಿ ನಿಜವಾದ ಫಲಾನುಭವಿಗಳ ಪಟ್ಟಿ ತಯಾರಿಸಲಾಗಿತ್ತು. ಇದಕ್ಕೆ ವಿಪಕ್ಷಗಳು ಆಕ್ಷೇಪಿಸಿ ನಗರಸಭೆ ಮುಂದೆ ಧರಣಿ ಮಾಡಿದ ನಂತರ ಕೋರ್ಟಿನಲ್ಲಿ ಸ್ಟೇ ತರಲಾಗಿತ್ತು. ಈಗ ಎಲ್ಲವೂ ಬಗೆಹರಿದಿವೆ. ಆದಷ್ಟು ಬೇಗ ನಿವೇಶನಗಳನ್ನು ಪಾರದರ್ಶಕವಾಗಿ ಲಾಟರಿ ಮೂಲಕ ಹಂಚಲಾಗುವುದು ಎಂದರು.

ಎಲ್ಲಾ ಲೇಔಟನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಈಗಾಗಲೇ ಕುಡಿಯುವ ನೀರು, ಚರಂಡಿ, ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗಿದೆ. ನಿವೇಶನ ಹಂಚಿಕೆ ಆದ ನಂತರ ಮನೆ ಕಟ್ಟಿಕೊಳ್ಳಲು ಎಸ್‌ಸಿ, ಎಸ್‌ಟಿಗಳಿಗೆ 3.30 ಲಕ್ಷ ರು. ಗಳು ಹಾಗೂ ಇತರರಿಗೆ 2.70 ಲಕ್ಷ ರು.ಗಳು ಸಹಾಯಧನವನ್ನು ರಾಜ್ಯ ಸರಕಾರ ನೀಡಲಿದೆ. ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಶಾಶ್ವತವಾಗಿ ಯಾರು ವಾಸವಾಗಿರುವ ವಸತಿ ಹಾಗೂ ನಿವೇಶನ ರಹಿತ ಪ್ರತಿಯೊಬ್ಬರಿಗೆ ಸೂರು ಕಲ್ಪಿಸಿ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈಗಾಗಲೇ ಹಳಿಸಗರ ಮಲ್ಲಯ್ಯನ ಮಡ್ಡಿಯಲ್ಲಿ 480 ನಿವೇಶನಗಳನ್ನು ಗುರುತಿಸಲಾಗಿದೆ. ಅಳಿಸಗರದಿಂದ ಮಲ್ಲಯ್ಯನ ಮಡ್ಡಿಗೆ ಹೋಗುವ ರಸ್ತೆ ಕಾಮಗಾರಿಗಾಗಿ ಕೆಕೆಆರ್ಡಿಬಿಯಿಂದ 75 ಲಕ್ಷ ರು. ಗಳು ಮಂಜೂರು ಆಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಾಗಬೇಕಾದರೆ ಚುನಾಯಿತ ಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದೆ. ಎಲ್ಲರೂ ಕೂಡಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.

ಪೌರಾಯುಕ್ತ ರಮೇಶ್ ಬಡಿಗೇರ್ ಮಾತನಾಡಿ, 2021-22 ನೇ ಸಾಲಿನ ಅನುದಾನದಲ್ಲಿ 13 ಜನರಿಗೆ ಲ್ಯಾಪ್ಟಾಪ್, 46 ಜನ ಮಹಿಳೆಯರಿಗೆ ಬ್ಯೂಟಿಷಿಯನ್ ತರಬೇತಿ, 62 ಮಹಿಳೆಯರಿಗೆ ಹೊಲಿಗೆ ತರಬೇತಿ ಹಾಗೂ 45 ಅಲೆಮಾರಿ ಅರೆ ಅಲೆಮಾರಿ ಸಮುದಾಯ ಮಹಿಳೆಯರಿಗೆ ನಿವೇಶನ ಹಕ್ಕು ಪತ್ರ ಸಚಿವರು ವಿತರಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ, ಯಾದಗಿರಿ ನಗರಾಭಿವೃದ್ಧಿ ಕೋಶಾಧಿಕಾರಿ ಲಕ್ಷ್ಮಿಕಾಂತ್, ತಹಸೀಲ್ದಾರ್ ಉಮಾಕಾಂತ ಹಳ್ಳೆ, ತಾ.ಪಂ. ಅಧಿಕಾರಿ ಸೋಮಶೇಖರ್ ಬಿರಾದಾರ್, ಹಿಂದುಳಿದ ಕಲ್ಯಾಣ ತಾಲೂಕಾಧಿಕಾರಿ ಚೆನ್ನಪ್ಪಗೌಡ ಚೌದ್ರಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ್ ಸುರಪುರಕರ್, ನಗರ ಸಭೆಯ ಎಇಇ ನಾನಾಸಾಬ್, ಪರಿಸರ ಅಭಿಯಂತರ ಹರೀಶ್ ಸಜ್ಜನ್ ಶೆಟ್ಟಿ ಸೇರಿದಂತೆ ಇತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ