ಕನ್ನಡಪ್ರಭ ವಾರ್ತೆ ಮಡಿಕೇರಿ ಜಿಲ್ಲಾ ಕಾರಾಗೃಹದಲ್ಲಿನ ಬಂಧಿಗಳು ಮುಂದಿನ ದಿನಗಳಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಸಿ.ಶಾಮ್ ಪ್ರಸಾದ್ ಸಲಹೆ ಮಾಡಿದ್ದಾರೆ.
ನಬಾರ್ಡ್ ವತಿಯಿಂದ ಏರ್ಪಡಿಸಲಾಗಿದ್ದ ವೃತ್ತಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ಬಹು ಉಪಯುಕ್ತವಾಗಿದ್ದು, ಕಾರಾಗೃಹ ಬಂಧಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.
ನಬಾರ್ಡ್ನ ಮಹಾ ಪ್ರಬಂಧಕರಾದ ಡಾ.ಕೆ.ಎಸ್.ಮಹೇಶ್ ಅವರು ಮಾತನಾಡಿ, ವೃತ್ತಿ ಕೌಶಲ್ಯ ತರಬೇತಿ ಪಡೆಯುವುದರಿಂದ ಸ್ವ ಉದ್ಯೋಗ ಕೈಗೊಳ್ಳಲು ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಕಾರಾಗೃಹ ಬಂಧಿಗಳು ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸುವತ್ತ ಗಮನಹರಿಸಬೇಕು ಎಂದು ಅವರು ಸಲಹೆ ಮಾಡಿದರು.ನಬಾರ್ಡ್ ಸಂಸ್ಥೆಯು ಕಳೆದ 40 ವರ್ಷಗಳಿಂದ ಕೃಷಿ, ತೋಟಗಾರಿಕೆ, ಪಶುಪಾಲನೆ, ಜಲಾನಯನಕ್ಕೆ ಒತ್ತು ನೀಡುವುದು, ಜೊತೆಗೆ ಮಹಿಳಾ ಸಬಲೀಕರಣ, ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಗಮನ ಹರಿಸುವುದು, ಹೀಗೆ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ಡಾ.ಕೆ.ಎಸ್.ಮಹೇಶ್ ಅವರು ತಿಳಿಸಿದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ವಿ.ರಮೇಶ್ ಬಾಬು ಅವರು ಮಾತನಾಡಿ, ಕಾರಾಗೃಹವು ಶಿಕ್ಷೆ ನೀಡುವ ತಾಣವಲ್ಲ. ಬದಲಿಗೆ ಪರಿವರ್ತನೆಗೊಳ್ಳುವ ಸ್ಥಳ ಎಂದರೆ ತಪ್ಪಾಗಲಾರದು ಎಂದು ಅವರು ಹೇಳಿದರು.
ನಬಾರ್ಡ್ ವತಿಯಿಂದ 50 ತರಬೇತಿದಾರರಿಗೆ ಟೂಲ್ ಕಿಟ್ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ ನಾಯ್ಕ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಉಮಾಕಾಂತ್, ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ರಾಜೇಶ್ ಕುಮಾರ್, ಎಸ್‌ಬಿಐನ ಪ್ರಾದೇಶಿಕ ಮುಖ್ಯಸ್ಥರಾದ ಶ್ರೀಜಿತ್, ಓಡಿಪಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಅಲೆಕ್ಸ್ ಪ್ರಶಾಂತ್ ಸಿಕ್ವೇರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ಇತರರು ಇದ್ದರು.
ನಂತರ ಅಪ್ಪಂಗಳದ ಸಾಂಬಾರ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರಾದ ಅಂಕೇಗೌಡ ಅವರು ಇದ್ದರು.
ನಂತರ ನಂಜರಾಯಪಟ್ಟಣದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಭೇಟಿ ನೀಡಿ ನಬಾರ್ಡ್ನ ಗೋದಾಮು ಪರಿಶೀಲಿಸಿದರು. ಬಳಿಕ ಬಾಳೆಗುಂಡಿಯ ಹಾಡಿಗೆ ಭೇಟಿ ನೀಡಿ ಟಿಡಿಎಫ್ ನಾನ್‌ವಾಡಿ ಯೋಜನೆಯನ್ನು ಪರಿಶೀಲಿಸಿದರು. ಬಾಳೆಗುಂಡಿಯ 20 ಆದಿವಾಸಿ ಕುಟುಂಬಗಳಿಗೆ ಕೋಳಿ ಮರಿ ವಿತರಿಸಿದರು.
ನಗರದ ಕೂಡಿಗೆಯ ಗ್ರಾಮೀಣ ಸ್ವ ಉದ್ಯೋಗ ತರಭೇತಿ ಕೇಂದ್ರಕ್ಕೆ ಭೇಟಿ ನೀಡಿ ಕುಡಿಯುವ ನೀರು ಘಟಕ ಉದ್ಘಾಟಿಸಿದರು. ಕಂಪ್ಯೂಟರ್, ಪ್ರೋಜೆಕ್ಟರ್ ಮತ್ತು ಜೆರಾಕ್ಸ್ ಯಂತ್ರ ವಿತರಿಸಿದರು. ನಬಾರ್ಡ್ ನ ಜಿಲ್ಲಾ ವ್ಯವಸ್ಥಾಪಕರಾದ ರಮೇಶ್ ಬಾಬು ಇದ್ದರು.