ಹುಬ್ಬಳ್ಳಿ:
ಸಹಕಾರ ಸಂಘಗಳ ಮೂಲಕ ಸ್ವಾವಲಂಬಿ, ಸಮೃದ್ಧಿ, ಸ್ವಾಭಿಮಾನದ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ. ಇದ್ದಕ್ಕಾಗಿ ದೇಶಾದ್ಯಂತ ಚಳವಳಿ ನಡೆದಿದ್ದು ಸಹಕಾರ ಸಂಘಗಳಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.ಬುಧವಾರ ಇಲ್ಲಿನ ಜೆ.ಸಿ. ನಗರದ ಮುನ್ಸಿಪಲ್ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಹುಬ್ಬಳ್ಳಿ ತಾಲೂಕಿನ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ಏಷ್ಯಾದಲ್ಲಿಯೇ ಸಹಕಾರ ಸಂಘಗಳಿಂದ ಜನರ ಅಭಿವೃದ್ಧಿ ಸಾಧಿಸಬಹುದು ಎಂದು ತೋರಿಸಿಕೊಟ್ಟ ರಾಷ್ಟ್ರ ಭಾರತ. 1905ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ನೇತೃತ್ವದಲ್ಲಿ ಸಹಕಾರ ಸಂಘ ಸ್ಥಾಪಿಸಲಾಯಿತು ಎಂದ ಅವರು, ಸಾರ್ವಜನಿಕರ ಜತೆ ಸರ್ಕಾರ ಕೈ ಜೋಡಿಸಿದರೆ ಮಾತ್ರ ನಿರೀಕ್ಷಿತ ಅಭಿವೃದ್ಧಿ ಸಾಧಿಸಬಹುದು. ಕೇಂದ್ರ ಸರ್ಕಾರವು ಸಹಕಾರ ಸಂಘಗಳ ಉತ್ತೇಜಿಸಲು ಸಹಕಾರ ಇಲಾಖೆ ಆರಂಭಿಸಿದೆ ಎಂದರು.ಸಹಕಾರ ಸಂಘ ಸಂಸ್ಥೆಗಳನ್ನು ಕಂಪ್ಯೂಟರೀಕರಣ ಮಾಡುತ್ತಿದ್ದು 200ಕ್ಕೂ ಅಧಿಕ ಸಂಘಗಳ ಕಂಪ್ಯೂಟರೀಕರಣ ಪೂರ್ಣಗೊಂಡಿದೆ ಎಂದು ಹೇಳಿದರು.
ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕ ಮಾತನಾಡಿದರು. ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಉಮೇಶ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಹಕಾರ ರತ್ನ ಪುರಸ್ಕೃತರಾದ ಚಂಬಣ್ಣ ಬಂಡಿ, ಫಕ್ಕೀರಗೌಡ ಕಲ್ಲನಗೌಡ್ರ, ಉತ್ತಮ ಸಹಕಾರ ಸಂಸ್ಥೆಗಳಾದ ಪ್ರಾಥಮಿಕ ಸಹಕಾರ ಪತ್ತಿನ ಸಂಘ ಛಬ್ಬಿ, ಬ್ಯಾಹಟ್ಟಿ ಮತ್ತು ಕೋಳಿವಾಡ, ಹಾಲು ಉತ್ಪಾದಕ ಸಂಘ ಗಿರಿಯಾಲ, ಹುಬ್ಬಳ್ಳಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಮಹಿಳಾ ಸ್ವ-ಸಹಾಯ ಸಂಘ ಮಹಾಲಕ್ಷ್ಮೀ ಸಂಘ ಹುಬ್ಬಳ್ಳಿ, ಶ್ರೀ ಗಜಾನನ್ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿ ಹುಬ್ಬಳ್ಳಿ ಮತ್ತು ಅದರಗುಂಚಿಯ ನಿವೃತ್ತ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಪ್ಪ ಗುರಕ್ಕನವರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್‌ನಿಂದ ಮುನ್ಸಿಪಲ್ ನೌಕರರ ಭವನದ ವೆರೆಗೆ ಸಹಕಾರ ಜಾಥಾ ನಡೆಯಿತು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಕಾಸ್ಕಾರ್ಡ್ ಬ್ಯಾಂಕಿನ ಉಪಾಧ್ಯಕ್ಷ ಉಳವಪ್ಪ ದಾಸನೂರ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಸುರೇಶ ಬಣವಿ, ಹುಬ್ಬಳ್ಳಿ ಅರ್ಬನ್ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ವಿಕ್ರಮ ಶಿರೂರ, ಶ್ರೀಗಜಾನನ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಹಿತೇಶಕುಮಾರ ಮೋದಿ, ಮಹಾರಾಜಾ ಅಗ್ರಸೇನಾ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಮಿತ ಮಹಾಜನ, ಕೆಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ಜಿಲ್ಲಾ ಉಸ್ತುವಾರಿ ಅಧಿಕಾರಿ ಎಂ.ಬಿ. ಪೂಜಾರ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರೇಣುಕಾ, ವಿ.ಜಿ. ಕುಲಕರ್ಣಿ, ಮಲ್ಲಿಕಾರ್ಜುನ ಸಾವುಕಾರ ಸೇರಿದಂತೆ ವಿವಿಧ ಬ್ಯಾಂಕಿನ ಅಧಿಕಾರಿಗಳು, ಸಂಘಗಳ ಪದಾಧಿಕಾರಿಗಳು ಹಾಜರಿದ್ದರು. ಕೆಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ ಸ್ವಾಗತಿಸಿದರು.