ಫರಂಗಿಪೇಟೆ ರೈಲು ನಿಲ್ದಾಣ ಅಭಿವೃದ್ಧಿಗೆ ಸಮಗ್ರ ಯೋಜನೆ: ಸಂಸದ ಚೌಟ ಸೂಚನೆ

KannadaprabhaNewsNetwork | Published : Nov 5, 2024 12:32 AM

ಸಾರಾಂಶ

ಫರಂಗಿಪೇಟೆ ರೈಲು ನಿಲ್ದಾಣದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೈಋತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಫರಂಗಿಪೇಟೆ ರೈಲು ನಿಲ್ದಾಣದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸುವಂತೆ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೈಋತ್ಯ, ದಕ್ಷಿಣ ಹಾಗೂ ಕೊಂಕಣ ರೈಲ್ವೆ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನರ ಅನುಕೂಲಕ್ಕಾಗಿ ಫರಂಗಿಪೇಟೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವಂತೆ ಹೇಳಿದರು.

ಸೆಂಟ್ರಲ್‌ ನಿಲ್ದಾಣ ಪುನರಾಭಿವೃದ್ಧಿ:

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದ್ದು, ಕೇಂದ್ರ ಕಚೇರಿ ಮೂಲಕ ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಸ್ಟೇಬ್ಲಿಂಗ್ ಲೈನ್ ಒದಗಿಸಲಾಗುವುದು ಮತ್ತು ವರ್ಷದೊಳಗೆ ಕಾಮಗಾರಿಯನ್ನು ಕಾರ್ಯಗತಗೊಳಿಸಲಾಗುವುದು ಎಂದರು.

ಬಂದರ್‌ನಲ್ಲಿರುವ ಗೂಡ್ಸ್‌ ಶೆಡ್‌ನ್ನು ಉಳ್ಳಾಲ ಮತ್ತು ಪಣಂಬೂರಿಗೆ ಶಾಶ್ವತವಾಗಿ ಸ್ಥಳಾಂತರಿಸಲು ಸಮಗ್ರ ಯೋಜನೆ ಸಿದ್ಧಪಡಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.

ಪಾಂಡೇಶ್ವರ ರೈಲ್ವೆ ಗೇಟ್‌ನಲ್ಲಿ ದಟ್ಟಣೆ:

ಪಾಂಡೇಶ್ವರ ರೈಲ್ವೆ ಗೇಟ್‌ನಲ್ಲಿ ವಾಹನ ದಟ್ಟಣೆ ತಪ್ಪಿಸಲು ರೈಲ್ವೆ ಕೆಳಸೇತುವೆ ಮಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು. ಇದನ್ನು ಕಾರ್ಯಗತಗೊಳಿಸಲು ಕಾರ್ಯಸಾಧ್ಯತೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆ ಕಾರ್ಯ ನಿರ್ವಾಹಕ ಎಂಜಿನಿಯರ್ ನರೇಶ್ ಶೆಣೈ, ಸುರತ್ಕಲ್‌ ಎನ್‌ಐಟಿಕೆಗೆ ರೈಲ್ವೆ ಕೆಳಸೇತುವೆ ಮಾಡುವ ಕಾರ್ಯಸಾಧ್ಯತಾ ವರದಿ ನೀಡಲು ತಿಳಿಸಲಾಗಿದೆ. ಅಲ್ಲಿನ ಚರಂಡಿಗಳಲ್ಲಿನ ನೀರಿನ ಮಟ್ಟ ಸೇರಿದಂತೆ ಪ್ರದೇಶದ 500 ಮೀ. ಸುತ್ತಳತೆಯ ಸಮೀಕ್ಷೆಯ ವರದಿಯನ್ನು ಎನ್‌ಐಟಿಕೆ ಕೇಳಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಮತ್ತು ಸಂಸದ ಕ್ಯಾಪ್ಟನ್ ಚೌಟ ಅವರು ಲಭ್ಯವಿರುವ ಅಂಕಿಅಂಶಗಳನ್ನು ಎನ್ಐಟಿಕೆಗೆ ಸಲ್ಲಿಸಿ, ಕಾರ್ಯಸಾಧ್ಯತಾ ಅಧ್ಯಯನ ವರದಿ ಸಿದ್ಧಪಡಿಸುವಂತೆ ಸೂಚಿಸಿದರು.

ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಲೆವೆಲ್ ಕ್ರಾಸಿಂಗ್‌ನಲ್ಲಿರುವ ರಸ್ತೆಯ ಅಗಲವನ್ನು ವಿಸ್ತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ., ಮೇಯರ್‌ ಮನೋಜ್‌ ಕೋಡಿಕಲ್‌, ಪಾಲಕ್ಕಾಡ್‌ ರೈಲ್ವೆಯ ಅಪರ ಪ್ರಾದೇಶಿಕ ವ್ಯವಸ್ಥಾಪಕ ಅನಿಲ್‌ ಕುಮಾರ್‌, ಕೊಂಕಣ ರೈಲ್ವೆಯ ಪ್ರಾದೇಶಿಕ ವ್ಯವಸ್ಥಾಪಕಿ ಆಶಾ ಮತ್ತಿತರರು ಇದ್ದರು.............

ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್‌ ಜನವರಿಗೆ ಸಿದ್ಧ

ನಗರದ ಮಹಾಕಾಳಿಪಡ್ಪು ರೈಲ್ವೆ ಅಂಡರ್‌ಪಾಸ್‌ ಕಾಮಗಾರಿ 2025ರ ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. ಇದರ ಸಂಪರ್ಕ ರಸ್ತೆಯ ಕಾಮಗಾರಿಯನ್ನು ಸಮಾನಾಂತರವಾಗಿ ಕೈಗೆತ್ತಿಕೊಳ್ಳುವಂತೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

Share this article