ರೈತರಿಗೆ ನೀಡಿರುವ ನೋಟಿಸ್‌ ಹಿಂಪಡೆಯಲಿ

KannadaprabhaNewsNetwork |  
Published : Nov 05, 2024, 12:32 AM IST
ಪೋಟೊ4ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ವಕ್ಫ್ ಅಕ್ರಮ ವಿರೋಧಿಸಿ ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲಾಯಿತು.4ಕೆಎಸಟಿ1ಎ: ಕುಷ್ಟಗಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ವಕ್ಫ್ ಅಕ್ರಮ ವಿರೋಧಿಸಿ ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ ನಡೆಸಲಾದ ಪ್ರತಿಭಟನೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ವಕ್ಫ್ ಅಕ್ರಮ ವಿರೋಧಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಆಗ್ರಹ

ಕನ್ನಡಪ್ರಭ ವಾರ್ತೆ ಕುಷ್ಟಗಿ

ವಕ್ಫ್ ಅಕ್ರಮ ವಿರೋಧಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಯಿತು.

ನೇತೃತ್ವ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರವೂ ವೋಟಿನ ಆಸೆಗಾಗಿ ರೈತರ ಹಾಗೂ ಮಠ, ಮಾನ್ಯಗಳ ಆಸ್ತಿ, ಜಮೀನುಗಳನ್ನು ಕಬಳಿಕೆ ಮಾಡಲು ದೊಡ್ಡ ಹುನ್ನಾರ ನಡೆಸುತ್ತಿದ್ದು, ಭಯದಲ್ಲಿ ಜೀವನ ನಡೆಸುವಂತಾಗಿದೆ. ರೈತರ ಹಾಗೂ ಮಠ ಮಾನ್ಯಗಳ ಆಸ್ತಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಿಸುತ್ತಿದ್ದು, ಇದು ಬಹಳ ಖಂಡನೀಯ. ಇದನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಉಪಚುನಾವಣೆ ಸಲುವಾಗಿ ಮತ ಸೆಳೆಯುವ ಹಿನ್ನೆಲೆ ನೋಟಿಸ್‌ ಕೊಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹೇಳಿದ್ದಾರೆ. ಈ ಪ್ರಕ್ರಿಯೆ ಇಲ್ಲಿಗೆ ಕೊನೆಯಾಗಬೇಕು. ನೀಡಿರುವ ನೋಟಿಸ್‌ ವಾಪಸ್‌ ಹಿಂಪಡೆಯಬೇಕು. ಇಲ್ಲದಿದ್ದರೆ ರೈತರ, ಮಠಮಾನ್ಯಗಳ ಪರವಾಗಿ ಹೋರಾಟ ಮಾಡುತ್ತೇವೆ. ವಾಲ್ಮೀಕಿ ನಿಗಮ, ಮುಡಾ ಹಗರಣವನ್ನು ಮುಚ್ಚಿಹಾಕಲು ಇಂತಹ ಕೆಲಸ ಮಾಡುತ್ತಿದ್ದು, ಈ ನೀಚತನಕ್ಕೆ ರಾಜ್ಯದ ಜನತೆಯು ಬುದ್ಧಿ ಕಲಿಸಲಿದ್ದಾರೆ ಎಂದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ ಮಾತನಾಡಿ, ವಕ್ಫ್ ಎಂದು ನಮೂದಿಸಿರುವ ಎಲ್ಲ ಪಹಣಿಗಳನ್ನು ತಿದ್ದುಪಡಿ ಮಾಡಿಸಬೇಕು, ನೀಡಿರುವ ನೋಟಿಸ್‌ಗಳನ್ನು ಹಿಂಪಡೆಯಬೇಕು ಎಂದರು.

ಬಿಜೆಪಿ ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರು, ಪಕ್ಷದ ಪ್ರಮುಖರಾದ ನಬಿಸಾಬ ಕುಷ್ಟಗಿ, ಬಸವರಾಜ ಉಪಲದಿನ್ನಿ ಮಾತನಾಡಿದರು.

ಕುಷ್ಟಗಿ ಪಟ್ಟಣದ ಮಲ್ಲಯ್ಯ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣ, ಮಾರುತಿ ವೃತ್ತ ಹಾಗೂ ಬಸವೇಶ್ವರ ವೃತ್ತದವರೆಗೂ ತೆರಳಿ ಸಮಾವೇಶಗೊಂಡು ತಹಸೀಲ್ದಾರ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಪಕ್ಷದ ಪ್ರಮುಖರಾದ ಶೈಲಜಾ ಬಾಗಲಿ, ಕಲ್ಲೇಶ ತಾಳದ, ಅಶೋಕ ಬಳೂಟಗಿ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ