ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಒತ್ತಾಯ

KannadaprabhaNewsNetwork |  
Published : Dec 22, 2024, 01:32 AM IST
21ಎಚ್ಎಸ್ಎನ್9 : ವಳಲಹಳ್ಳಿ ಗ್ರಾಮದಲ್ಲಿ  ಹಡ್ಲಹಳ್ಳಿ-ಹೊರಟ್ಟಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕುರಭತ್ತೂರು ಗ್ರಾಮ ಪಂಚಾಯಿತಿಯ ಹಡ್ಲಹಳ್ಳಿ ಹೊರಟ್ಟಿಯ ಹತ್ತಾರು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಚೆಸ್ಕಾಂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೊರುತ್ತಿದ್ದಾರೆಂದು ಆರೋಪಿಸಿ ವಳಲಹಳ್ಳಿ ಕೂಡಿಗೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸಲು ಅಧಿಕಾರಿಗಳು ಮುಂದಾಗದೆ ತಾಂತ್ರಿಕ ಕಾರಣ ನೀಡುತ್ತಿದ್ದಾರೆ ಎಂದು ದೂರಿದ ಪ್ರತಿಭಟನಕಾರರು, ಸ್ಥಳಕ್ಕೆ ಬಂದ ಚೆಸ್ಕಾಂ ಸಹಾಯಕ ಕಾರ್ಯಪಾಲ ಅಭಿಯಂತರ ಹರೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಸಕಲೇಶಪುರ ತಾಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಹಡ್ಲಹಳ್ಳಿ ಹೊರಟ್ಟಿಯ ಹತ್ತಾರು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಚೆಸ್ಕಾಂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೊರುತ್ತಿದ್ದಾರೆಂದು ಆರೋಪಿಸಿ ವಳಲಹಳ್ಳಿ ಕೂಡಿಗೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಲೆನಾಡು ರಕ್ಷಣಾ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಗ್ರಾಮದ ಹತ್ತಾರು ಕುಟುಂಬಗಳಿಗೆ ದೇಶ ಸ್ವತಂತ್ರಗೊಂಡ ದಿನದಿಂದಲೂ ವಿದ್ಯುತ್ ಸಂಪರ್ಕ ಕಲ್ಪಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರಿಗೆ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರು ಇಂದಿಗೂ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಜೀವನ ನಡೆಸುವಂತಾಗಿದೆ ಎಂದರು ವಿಷಾದಿಸಿದರು.

ಈ ಜೋಡಿ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಅತಿಯಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರಬರುವುದು ಅಸಾಧ್ಯವಾಗಿದೆ. ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಮಂತ್ರಿಗಳಿಗೆ ಪತ್ರ ಬರೆದ ಪರಿಣಾಮ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳ ಆದೇಶವನ್ನು ಪಾಲಿಸಲು ಅಧಿಕಾರಿಗಳು ಮುಂದಾಗದೆ ತಾಂತ್ರಿಕ ಕಾರಣ ನೀಡುತ್ತಿದ್ದಾರೆ ಎಂದು ದೂರಿದ ಪ್ರತಿಭಟನಕಾರರು, ಸ್ಥಳಕ್ಕೆ ಬಂದ ಚೆಸ್ಕಾಂ ಸಹಾಯಕ ಕಾರ್ಯಪಾಲ ಅಭಿಯಂತರ ಹರೀಶ್ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಕಾಮಗಾರಿ ಆರಂಭಿಸುವವರೆಗೂ ಪ್ರತಿಭಟನೆ ಹಿಂದೆಪಡೆಯುವುದಿಲ್ಲ ಎಂದು ಪಟ್ಟುಹಿಡಿದು ಕೆಲಕಾಲ ಹೆತ್ತೂರು-ಸಕಲೇಶಪುರ ರಸ್ತೆಸಂಪರ್ಕ ತಡೆದು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಎಇಇ ಹರೀಶ್, ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅನುದಾನ ಬಿಡುಗಡೆಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಕೆಲಸ ಆರಂಭವಾಗಿಲ್ಲ. ಗ್ರಾಮಕ್ಕೆ ವಿದ್ಯುತ್ ಕಂಬಗಳನ್ನು ಸರಬರಾಜು ಮಾಡುವ ಮೂಲಕ ಕಾಮಗಾರಿ ಆರಂಭಿಸಲಾಗುವುದು ಎಂದರು. ವಿದ್ಯುತ್ ಕಂಬ ಗ್ರಾಮಕ್ಕೆ ತಲುಪುವವರೆಗೂ ಪ್ರತಿಭಟನೆ ಹಿಂದೆ ಪಡೆಯುವುದಿಲ್ಲ ಎಂದು ಪ್ರತಿಭಟನೆಕಾರರು ಪಟ್ಟುಹಿಡಿದರು. ಗ್ರಾಮಕ್ಕೆ ವಿದ್ಯುತ್ ಕಂಬಗಳು ಪೂರೈಕೆಯಾದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು.

ಪ್ರತಿಭಟನೆಯ ನೇತೃತ್ವವವನ್ನು ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕ ವಳಲಹಳ್ಳಿ ವೀರೇಶ್, ವಳಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರುದ್ರೇಶ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷ ರಮೇಶ್ ಪೂಜಾರಿ, ಮಲೆನಾಡ ರಕ್ಷಣಾ ಸೇನೆ ಅಧ್ಯಕ್ಷ ಜಾನೇಕೆರೆ ಸಾಗರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಕರಡಿಗಾಲ ಹರೀಶ್ ವಹಿಸಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ