ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿ ವರದಿ ನೀಡಬೇಕು ಎಂದು ಜಿಪಂ ಸಿಇಒ ಜಿ. ಪ್ರಭು ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರಿನ ಮೂಲಗಳನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿ ವರದಿ ನೀಡಬೇಕು ಎಂದು ಜಿಪಂ ಸಿಇಒ ಜಿ. ಪ್ರಭು ಸೂಚನೆ ನೀಡಿದರು.ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪಿಡಿಒ, ಕಾರ್ಯದರ್ಶಿ, ವಾಟರ್ ಮೆನ್‌ಗಳಿಗಾಗಿ ಹಮ್ಮಿಕೊಂಡಿದ್ದ ನೀರು ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಶುದ್ಧ ನೀರು ಕುಡಿದು ಜನರು ತೊಂದರೆಗೊಳಗಾಗಬಾರದು. ಎಲ್ಲ ಗ್ರಾಮಗಳಲ್ಲಿ ನೀರು ಕಲುಷಿತವಾಗದಂತೆ ಕ್ರಮ ವಹಿಸಬೇಕು. ಗ್ರಾಮದ ಪ್ರತೀ ಜಲ ಮೂಲ, ಓವರ್ ಹೆಡ್ ಟ್ಯಾಂಕ್, ಸಿಸ್ಟನ್ ಹಾಗೂ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಪ್ರತಿ ತಿಂಗಳಿಗೆ ಕಡ್ಡಾಯವಾಗಿ 10 ಪರೀಕ್ಷೆಗಳನ್ನು ಕೈಗೊಳ್ಳಬೇಕು. ಇದರಿಂದ ಗ್ರಾಮೀಣ ಜನರಿಗೆ ಶೇ.100ರಷ್ಟು ಶುದ್ಧ ನೀರನ್ನು ಪೂರೈಕೆ ಮಾಡಬಹುದಾಗಿದೆ ಎಂದು ತಿಳಿಸಿದರು.ಗ್ರಾಮೀಣ ಜನರಿಗೆ ಸುರಕ್ಷತೆ ಮತ್ತು ಆರೋಗ್ಯ ನೀಡುವುದು ಸ್ಥಳೀಯ ಗ್ರಾಮ ಪಂಚಾಯತಿಗಳ ಜವಾಬ್ಧಾರಿಯಾಗಿದೆ. ಅಧಿಕಾರಿಗಳ ಅಜಾಗರೂಕತೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗಬಾರದು. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ವಾಹಿನಿಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ಮನೆ ಮನೆಗಳಿಗೆ ತೆರಳಿ ಕಸವನ್ನು ಸಂಗ್ರಹ ಮಾಡಬೇಕು. ಜಾಗೃತಿ ಗೀತೆಗಳನ್ನು ಪ್ರಸಾರ ಮಾಡುವುದರ ಮೂಲಕ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದರು.ಪ್ರತಿ ಮನೆಯಿಂದ ತಿಂಗಳಿಗೆ 20 ರೂ.ಗಳ ಸ್ವಚ್ಛತಾ ಕರವನ್ನು ಸಂಗ್ರಹ ಮಾಡಬೇಕು. ಸಂಗ್ರಹವಾದ ಹಣವನ್ನು ಗ್ರಾಮ ಪಂಚಾಯತಿಯ ನೈರ್ಮಲ್ಯತೆ ಕಾಪಾಡಲು ಬಳಸಿಕೊಳ್ಳಬೇಕು ಎಂದರು. ಪಿಡಿಒ ತಮ್ಮ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ಚರಂಡಿಗಳ ಸ್ವಚ್ಛತೆ, ಓವರ್ ಹೆಡ್ ಟ್ಯಾಂಕುಗಳ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವುದಲ್ಲದೆ ಅನೈರ್ಮಲ್ಯತೆಯಿಂದ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.ಜಿಲ್ಲೆಯಲ್ಲಿ ಈವರೆಗೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ 1687 ಓವರ್ ಹೆಡ್ ಟ್ಯಾಂಕು, 26 ಕೆರೆಗಳನ್ನು ಸ್ವಚ್ಛಗೊಳಿಸಲಾಗಿದೆಯಲ್ಲದೆ ಸುಸ್ಥಿತಿಯಲ್ಲಿರುವ 1400 ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡಲಾಗುತ್ತಿದೆ. ಕಲುಷಿತವಾಗುವ ಮುನ್ನವೇ ನೀರಿನ ಗುಣಮಟ್ಟವನ್ನು ಪತ್ತೆ ಹಚ್ಚಿದಲ್ಲಿ ಆಗಬಹುದಾದ ಜೀವಹಾನಿ, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಗ್ರಾಮ ಮಟ್ಟದಲ್ಲಿ ಕಲುಷಿತ ನೀರಿನಿಂದ ಯಾವುದೇ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಸೂಚಿಸಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ರವೀಶ್, ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ತುಮಕೂರು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಕುಮಾರ್, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.