ಸುಭದ್ರ ಭಾರತಕ್ಕೆ ಕಡ್ಡಾಯವಾಗಿ ಮತ ಚಲಾಯಿಸಿ

KannadaprabhaNewsNetwork | Published : Apr 11, 2024 12:46 AM

ಸಾರಾಂಶ

ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಲೋಕಸಭೆ ಚುನಾವಣೆ ಯಶಸ್ವಿಗೊಳಿಸಿ ಉತ್ತಮ ಆಡಳಿತ ಪಡೆಯಲು ನಾಗರಿಕರ ಸಹಕಾರ ಪ್ರಮುಖವಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸುಭದ್ರ ದೇಶ ನಿರ್ಮಾಣಕ್ಕೆ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಲೋಕಸಭೆ ಚುನಾವಣೆ ಯಶಸ್ವಿಗೊಳಿಸಿ ಉತ್ತಮ ಆಡಳಿತ ಪಡೆಯಲು ನಾಗರಿಕರ ಸಹಕಾರ ಪ್ರಮುಖವಾಗಿದೆ ಎಂದು ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಿಶಿ ಆನಂದ ಹೇಳಿದರು.

ಮಂಗಳವಾರ ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ಸ್ಯಾಟ್‌ಲೈಟ್ ಬಸ್ ನಿಲ್ದಾಣಗಳಲ್ಲಿ ಅವರು ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸಹಯೋಗದಲ್ಲಿ ಲೋಕಸಭಾ ಚುನಾವಣೆ ೨೦೨೪ರ ಹಿನ್ನೆಲೆಯಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಯಾಣಿಕರೊಂದಿಗೆ ಮಾಹಿತಿ ವಿನಿಮಯ ನೀಡಿ ಅವರು ಮಾತನಾಡಿದರು.

ಚುನಾವಣಾ ಆಯೋಗ ಗುರುತು ಮಾಡಿರುವ ದಾಖಲೆಗಳೊಂದಿಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಹಿರಿಯರು, ವಿಶಿಷ್ಟ ಚೇತನರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾವುದೇ ಗೊಂದಲ ಉಂಟಾಗದಂತೆ ನಾಗರಿಕರು ಶಾಂತರೀತಿಯಿಂದ ಸಹಕರಿಸಿ ಜಿಲ್ಲೆಯಲ್ಲಿ ಶೇ.೧೦೦ ರಷ್ಟು ಮತದಾನ ಆಗುವಂತೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರವರು ಬಸ್ ನಿಲ್ದಾಣಗಳಲ್ಲಿ ಮತದಾನ ಜಾಗೃತಿ ಕುರಿತ ಪೋಸ್ಟರ್‌ಗಳನ್ನು ಗೋಡೆಗಳ ಮೇಲೆ ಅಂಟಿಸಿದರು. ಇದೇ ವೇಳೆ ಸಾರ್ವಜನಿಕರಿಗೆ, ಯುವ ಮತದಾರರಿಗೆ ಹಾಗೂ ಹಿರಿಯ ನಾಗರಿಕರಿಗೆ ಮತದಾನದ ಜಾಗೃತಿ ಕುರಿತು ಮಾಹಿತಿಯುಳ್ಳ ಕರಪತ್ರಗಳನ್ನು ಹಂಚುವ ಮೂಲಕ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಿದರು.

ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ.ಆರ್.ಮುಂಡರಗಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ.ಬಿ ಅಲ್ಲಾಪೂರ, ವಿಜಯಪುರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಹೊಂಗಯ್ಯ, ಕೇಂದ್ರ ಬಸ್ ನಿಲ್ದಾಣ ಅಧಿಕಾರಿ ಜೆ.ಕೆ.ಹುಗ್ಗೆಣ್ಣವರ, ಜಿಲ್ಲಾ ಎನ್.ಎಸ್.ಎಸ್ ಘಟಕದ ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಜಿಪಂ ಎಎಸೈ ರಾವ್ ಬಹಾದ್ದೂರ್ ಬಾಗವಾನ ಮುಂತಾದವರು ಇದ್ದರು.

Share this article