ಕನ್ನಡಪ್ರಭ ವಾರ್ತೆ ಹಾವೇರಿ
ನಗರದ ಹುಕ್ಕೇರಿಮಠ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಹಾವೇರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಲಾದ ಮೊದಲ ಹಂತದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಮತದಾನ ಪ್ರಕ್ರಿಯೆ ಜವಾಬ್ದಾರಿ ಜೊತೆಗೆ ಬೇಸಿಗೆ ಬಿಸಿಲಿನ ಅತ್ಯಂತ ಹೆಚ್ಚು ತಾಪ ಇರುವುದರಿಂದ ವೈಯಕ್ತಿವಾಗಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಚುನಾವಣಾ ಕಾರ್ಯವನ್ನು ಒತ್ತಡ ರಹಿತವಾಗಿ ಸಂತೋಷದಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.
ಮತಗಟ್ಟೆಗೆ ನಿಯೋಜಿತ ಪ್ರತಿ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ವ್ಯವಸ್ಥಿತ ಮತದಾನ ಪ್ರಕ್ರಿಯೆ ನಡೆಸಲು ಭಾರತ ಚುನಾವಣಾ ಆಯೋಗ ನೀಡಿರುವ ಮತಗಟ್ಟೆ ಅಧಿಕಾರಿಗಳ ಕೈಪಿಡಿಯ ನಿಯಮಾವಳಿಗಳನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಯಾವುದೇ ಗೊಂದಲಗಳಿದ್ದರೆ ತರಬೇತಿ ಅವಧಿಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕು. ಮತಗಟ್ಟೆ ವರೆಗೆ ನಿಮ್ಮ ಡೌಟ್‌ಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಸೂಚಿಸಿದರು.ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಆದರೆ ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹಾರಕಂಡುಕೊಳ್ಳಿ. ವಿವಿ ಪ್ಯಾಟ್‌ಗಳ ನಿರ್ವಹಣೆ ಸಹ ಅಚ್ಚುಕಟ್ಟಾಗಿರಬೇಕು. ವಿವಿ ಪ್ಯಾಟ್‌ಗಳನ್ನು ಕಿಟಕಿಯ ಪಕ್ಕ ಹಾಗೂ ರೂಮಿನ ಲೈಟ್ ಕೆಳಗೆ ಇಡದೆ ಸುರಕ್ಷಿತ ಸ್ಥಳದಲ್ಲಿ ಇಟ್ಟು ಗೊಂದಲಗಳಾಗದಂತೆ ಕ್ರಮ ವಹಿಸಬೇಕು. ಮತದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಎಂದು ತಿಳಿಸಿದರು.
ಮತದಾನದ ಹಿಂದಿನ ದಿನ ಮಸ್ಟರಿಂಗ್ ಕೇಂದ್ರದಲ್ಲಿ ವಿತರಣೆಯಾಗುವ ಚುನಾವಣಾ ಸಾಮಗ್ರಿಗಳನ್ನು ಮತಯಂತ್ರಗಳನ್ನು ಜವಾಬ್ದಾರಿಯುತವಾಗಿ ಪರಿಶೀಲಿಸಿ ಪಡೆಯಬೇಕು. ತಮಗೆ ನಿಗದಿಪಡಿಸಿದ ಮತಗಟ್ಟೆ ಕೇಂದ್ರಗಳಿಗೆ ತೆರಳಿದ ನಂತರ ಅಂದು ಸಂಜೆಯೇ ಆಯೋಗದ ಮಾರ್ಗಸೂಚಿಯಂತೆ ತಮಗೆ ಹಂಚಿಕೆಯಾದ ಜವಾಬ್ದಾರಿಗಳಂತೆ ಮತಗಟ್ಟೆ ಕೇಂದ್ರ ಸಿದ್ಧಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಯೋಗಿಕ ತರಬೇತಿ
ಮತದಾನದ ಹಿಂದಿನ ದಿನ ಮತಗಟ್ಟೆ ಅಧಿಕಾರಿಗಳು ಕೈಗೊಳ್ಳಬೇಕಾದ ಸಿದ್ಧತೆಗಳು, ಮತಯಂತ್ರಗಳ ಜೋಡಣೆ, ವಿವಿಧ ನಮೂನೆ ಹಾಗೂ ಲಕೋಟೆಗಳ ಸಿದ್ಧತೆಗಳನ್ನು ನಡೆಸಬೇಕು. ಮತದಾನದ ದಿನ ಮೇ ೭ರ ಬೆಳಗ್ಗೆ ೫-೩೦ರಿಂದ ಅಣುಕು ಮತದಾನಕ್ಕೆ ಸಿದ್ಧತೆ ಮಾಡಿಕೊಂಡು ಏಜೆಂಟರ್ ಸಮ್ಮುಖದಲ್ಲಿ ೬ ಗಂಟೆಯಿಂದ ಅಣುಕು ಮತದಾನ ನಡೆಸಿ, ಬೆಳಗ್ಗೆ ೭ ಗಂಟೆಗೆ ನೈಜ ಮತದಾನ ಆರಂಭಿಸಬೇಕು. ಎಲ್ಲವನ್ನೂ ಆಯೋಗದ ನಿಯಮಾವಳಿ ಪ್ರಕಾರವೇ ಕೈಗೊಳ್ಳಬೇಕು. ನೈಜ ಮತದಾನಕ್ಕೆ ಮುನ್ನ ಅಣುಕು ಮತದಾನದ ಅಂಕಿ-ಅಂಶಗಳನ್ನು ವಿದ್ಯುನ್ಮಾನ ಮತಯಂತ್ರದಿಂದ ಅಳಸಿಹಾಕಬೇಕು ಎಂದು ತಿಳಿಸಿದರು.
ಮತದಾನ ಮಾಡಲು ವೋಟರ್ ಸ್ಲೀಪ್ ಜೊತೆಗೆ ಭಾರತ ಚುನಾವಣಾ ಆಯೋಗ ನೀಡಿದ ಎಪಿಕ್ ಕಾರ್ಡ್ ಅಥವಾ ಚುನವಣಾ ಆಯೋಗ ಮಾನ್ಯ ಮಾಡಿದ ಭಾವಚಿತ್ರವಿರುವ ಇತರ ಯಾವುದಾದರೊಂದು ಗುರುತು ಪತ್ರಗಳನ್ನು ಖಚಿತಪಡಿಸಿಕೊಂಡು ಮತದಾನಕ್ಕೆ ಅವಕಾಶ ಕಲ್ಪಿಸಬೇಕು. ಮತದಾನಕ್ಕೆ ಮಾತ್ರ ಸರತಿಯಂತೆ ನಿಯಮಬದ್ಧವಾಗಿ ಮತದಾರರಿಗೆ ಪ್ರವೇಶಾವಕಾಶವಿರುತ್ತದೆ. ಕೊಠಡಿಯೊಳಗೆ ಮತದಾನ ಪ್ರಕ್ರಿಯೆಗೆ ಚುನಾವಣಾ ಆಯೋಗದಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿ ಹೊರತುಪಡಿಸಿ ಯಾರನ್ನೂ ಒಳಗೆ ಪ್ರವೇಶ ನೀಡಬಾರದು ಎಂದು ತಿಳಿಸಿದರು.