ಕಳೆದ ಹಲವು ತಿಂಗಳಿಂದ ಪಾವಗಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ನಕ್ಸಲ್ ಹೆಸರಿನಲ್ಲಿ ಕನಿಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಉಪ್ಪಾರ್ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಪಾವಗಡ : ಕಳೆದ ಹಲವು ತಿಂಗಳಿಂದ ಪಾವಗಡ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ, ನಕ್ಸಲ್ ಹೆಸರಿನಲ್ಲಿ ಕನಿಕಲಬಂಡೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದ ಉಪ್ಪಾರ್ ವೆಂಕಟೇಶ್ ಅಲಿಯಾಸ್ ‘ಸುಡೋ ನಕ್ಸಲ್’ ವೆಂಕಟೇಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಬಂಧಿಸಿದ್ದಾರೆ

ಪಾವಗಡ ಸಮೀಪದ ಕಡಮಲಕುಂಟೆ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಮದ್ಯಪಾನ ಮಾಡುತ್ತಾ ಚಿಕನ್ ಸೇವಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಈತ ಕಳೆದ ಕೆಲ ತಿಂಗಳಿಂದ ಕನಿಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ಹಾಗೂ ಬೆದರಿಕೆ ಹಾಕುತ್ತಿದ್ದ ಆರೋಪ ಎದುರಿಸುತ್ತಿದ್ದ. ಆ.29ರಂದು ರೈತ ಕರಿಯಣ್ಣ ಅವರ ಪಂಪ್‌ಸೆಟ್‌ಗೆ ನಾಡಬಾಂಬ್ ಇಟ್ಟು ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲೂ ಈತನ ಹೆಸರು ಕೇಳಿಬಂದಿದೆ. ಇತ್ತೀಚೆಗೆ ಗಂಗಸಾಗರ ಗ್ರಾಮದ ರೈತನಿಗೆ ‘ಪೀಪಲ್ಸ್ ವಾರ್ ದಳಂ’ ಹೆಸರಿನಲ್ಲಿ ₹5 ಲಕ್ಷಕ್ಕೆ ಬೇಡಿಕೆ ಪತ್ರ ಅಂಟಿಸಿದ ಪ್ರಕರಣದಲ್ಲೂ ಈತನ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಬಂಧನದಿಂದ ಕನಿಕಲಬಂಡೆ ಗ್ರಾಮಸ್ಥರು ನಿಟ್ಟುಸಿರು

ಬಂಧನದಿಂದ ಕನಿಕಲಬಂಡೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು, ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈತನನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಉಪ್ಪಾರ್‌ ವೆಂಕಟೇಶ್‌ ಬಂಧನ ಸುದ್ದಿ ಹರಡುತ್ತಿದ್ದಂತೆ ತಾಲೂಕಿನ ಕನಿಕಲಬಂಡೆ ಹಾಗೂ ಸಮೀಪದ ಗಂಗಸಾಗರ, ಕಡಪಲಕರೆ ಗೋರಸ್‌ ಮಾವು ಅಚ್ಚಮ್ಮನಹಳ್ಳಿ, ಪೊನ್ನಸಮುದ್ರ ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಪೊಲೀಸರ ಕಾರ್ಯಾಚರಣೆಗೆ ಶ್ಲಾಘಿಸಿದ್ದಾರೆ. ತುಮಕೂರು ಹೆಚ್ಚುವರಿ ಎಸ್‌ಪಿ ಗೋಪಾಲಯ್ಯ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ್ ನೇತೃತ್ವದಲ್ಲಿ ಪಾವಗಡ ಇನ್‌ಸ್ಪೆಕ್ಟರ್ ಸುರೇಶ್ ಗೌಡ, ಗ್ರಾಮಾಂತರ ಇನ್‌ಸ್ಪೆಕ್ಟರ್ ಕೊಟ್ರೇಶ್, ಎಸ್‌ಐ ಸುನಿಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.