ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗುತ್ತಿರುವುದು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕುಂಠಿತವಾಗುತ್ತಿರುವುದು ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಅಖಿಲ ಭಾರತ ಸನ್ಯಾಸಿಗಳ ಸಂಘದ ಅಧ್ಯಕ್ಷ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿ ಸಂಘ ಆಶ್ರಯದಲ್ಲಿ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯ ಅಂಗವಾಗಿ ಕಾವೇರಿ- ಬಂಗಾಳಕೊಲ್ಲಿ ಸಮುದ್ರ ಸಂಗಮ ಕಾವೇರಿಪಟ್ಟಣಂ ಬಳಿ ಪೂಂಪುಹಾರ್ ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡು ಭಾಗಗಳಲ್ಲಿ ಪ್ರಕೃತಿ ಮುನಿಸಿದಹಾಗೆ ಭಾಸವಾಗುತ್ತಿದೆ. ಇದರಿಂದ ಈ ಭಾಗದ ಕೃಷಿ ಸೇರಿದಂತೆ ಎಲ್ಲಾ ಮಾನವ ಚಟುವಟಿಕೆಗಳು ಸಮಸ್ಯೆಗೆ ಒಳಗಾಗಲು ಪ್ರಾರಂಭವಾಗಿದೆ ಎಂದರು. ನದಿ ಪ್ರಕೃತಿ ಪರಿಸರವನ್ನು ಪ್ರತಿಯೊಬ್ಬರೂ ಆರಾಧಿಸಬೇಕು ಎಂದು ಅವರು ಕರೆ ನೀಡಿದರು. ಕಾವೇರಿಯ ಆರಾಧನೆಯ ಮೂಲಕ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ ಎಂದು ಶ್ರೀಗಳು ಹೇಳಿದರು. ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಪ್ರಮುಖ ಶ್ರೀ ವೇದಾನಂದ ಸ್ವಾಮೀಜಿ ಮಾತನಾಡಿ, ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಕೊಡಗು ಜಿಲ್ಲೆಯ ತಲಕಾವೇರಿಯಿಂದ ತಮಿಳುನಾಡಿನ ಕಾವೇರಿ ಪಟ್ಟಣಂ ತನಕ ತಮಿಳುನಾಡು ಸೇರಿದಂತೆ ವಿವಿಧ ಪ್ರಾಂತಗಳ ಸಾಧುಸಂತರು ಸ್ವಾಮೀಜಿಗಳು ಕಾರ್ಯಕರ್ತರು ಸ್ವಚ್ಛ ಕಾವೇರಿಗಾಗಿ ಪ್ರತಿ ವರ್ಷ ಒಂದು ತಿಂಗಳ ನದಿ ಜಾಗೃತಿ ರಥಯಾತ್ರೆ ಹಮ್ಮಿಕೊಂಡು ಸ್ವಚ್ಛ ಕಾವೇರಿಯ ಗುರಿ ಹೊಂದಿ ಸಾಗುತ್ತಿದೆ ಎಂದರು. ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಮಾತನಾಡಿ ಸ್ವಚ್ಛ ಕಾವೇರಿಗಾಗಿ ಕಳೆದ 16 ವರ್ಷಗಳಿಂದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ ತನಕ ನದಿ ಜಾಗೃತಿ ರಥಯಾತ್ರೆ ಹಮ್ಮಿಕೊಳ್ಳುವ ಮೂಲಕ ಜನರಿಗೆ ನದಿ ಮಹತ್ವ ಮತ್ತು ಸಂರಕ್ಷಣೆಯ ಅರಿವು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.ತಲಕಾವೇರಿಯಿಂದ ಯಾತ್ರೆಯಲ್ಲಿ ಕಳಸಗಳಲ್ಲಿ ತಂದಿರುವ ಪವಿತ್ರ ಕಾವೇರಿ ಜಲವನ್ನು ವಿಶೇಷ ಹೋಮ ಹವನ ಪೂಜೆ ವಿಧಾನಗಳನ್ನು ಮುಗಿಸಿ ನಂತರ ಸಮುದ್ರ ಸಂಗಮದಲ್ಲಿ ವಿಸರ್ಜನೆ ಮಾಡಿ ಪ್ರಾರ್ಥಿಸಲಾಯಿತು. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನದಿ ಸಂರಕ್ಷಣೆಯ ಸಂಬಂಧ ಅಗತ್ಯ ಯೋಜನೆಗಳನ್ನು ರೂಪಿಸಲು ಎರಡು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹ ಪಡಿಸುವ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಅಖಿಲ ಭಾರತ ಸನ್ಯಾಸಿಗಳ ಸಂಘದ ಶ್ರೀ ಆತ್ಮಾನಂದ ಸ್ವಾಮೀಜಿ ಪ್ರಾಸ್ತಾವಿಕ ವಿಷಯ ಮಂಡಿಸಿದರು.ಒಂದು ತಿಂಗಳ ಕಾಲದ ಯಾತ್ರೆ ಅವಧಿಯಲ್ಲಿ ಸಹಕರಿಸಿದ ಸರ್ವರನ್ನು ಅಖಿಲ ಭಾರತ ಸನ್ಯಾಸಿ ಸಂಘದ ಪ್ರಮುಖ ಶ್ರೀ ಶಿವರಾಮನಂದ ಸ್ವಾಮೀಜಿ ಮತ್ತು ಕಾರ್ಯಕ್ರಮ ಸಂಯೋಜಕರಾದ ಶ್ರೀ ಬಾಲ ರಘುನಾಥನಂದ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿ ಗೌರವಿಸಿದರು. ಅಖಿಲ ಭಾರತೀಯ ಸನ್ಯಾಸಿಗಳ ಸಂಗಮ 2028 ರಲ್ಲಿ ಆಯೋಜಿಸುತ್ತಿರುವ ಕುಂಭಕೋಣಂ ಮಹಾ ಕುಂಭಮೇಳದ ಕರ ಪತ್ರವನ್ನು ಅಖಿಲ ಭಾರತೀಯ ಸನ್ಯಾಸಿಗಳ ಸಂಘದ ಅಧ್ಯಕ್ಷ ಶ್ರೀ ರಾಮನಂದ ಕುಮಾರ ಗುರುಪರ ಸ್ವಾಮಿಗಳು ಮತ್ತಿತರ ಸಾಧು ಸಂತರು ಬಿಡುಗಡೆಗೊಳಿಸಿದರು. ಮೌನ ವ್ರತದಲ್ಲಿದ್ದ ಅಖಿಲ ಭಾರತ ಸನ್ಯಾಸಿಗಳ ಸಂಗಮದ ಸ್ಥಾಪಕ ಶ್ರೀ ರಾಮನಂದ ಸ್ವಾಮೀಜಿ ಆಶೀರ್ವಾದ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಕುಶಾಲನಗರದಿಂದ ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರಾದ ಕೆ ಜಿ ಮನು, ಕಾವೇರಿ ಆರತಿ ಬಳಗದ ಮಂಜುನಾಥ್, ಶಿವಾಜಿ ರಾವ್, ಆತ್ಮಾನಂದ, ರಾಜು, ಸುಮನ್, ನವೀನ್ ಕುಮಾರ್ ಸೇರಿದಂತೆ 12 ಮಂದಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.