ಕನ್ನಡಪ್ರಭ ವಾರ್ತೆ ಸಕಲೇಶಪುರ
ಶುಕ್ರವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನಾಲ್ಕನೇ ತಾಲೂಕು ಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಿಂದಿ ಭಾಷೆಗೆ ಸಂವಿಧಾನದ ಬಲ ಇರುವ ಕಾರಣ ವೇಗವಾಗಿ ಬೆಳಯುತ್ತಿದೆ. ಇದೇ ರೀತಿ ರಾಜ್ಯ ಸರ್ಕಾರ ಸಹ ಕನ್ನಡ ಬೆಳವಣಿಗೆಗೆ ಸಂವಿಧಾನ ಬಲ ನೀಡಬೇಕಿದೆ ಎಂದರು.
ಕನ್ನಡ ಕಲಿಕೆಯ ಮೊದಲ ಮೆಟ್ಟಿಲಾದ ಕನ್ನಡ ಶಾಲೆಗಳು ವ್ಯಾಪಕವಾಗಿ ಮುಚ್ಚುತ್ತಿರುವುದು ಕಳವಳಕಾರಿ. ನೂರಾರು ವರ್ಷಗಳ ಹಿಂದೆ ಶಾಲೆಗಳಿಗೆ ಭೂಮಿಯನ್ನು ದಾನ ನೀಡಲಾಗಿದೆ. ಆದರೆ ನೂರು ವರ್ಷಗಳ ಕಳೆದರೂ ಶಾಲೆಗಳಿಗೆ ಹಕ್ಕುಪತ್ರ ಮಾಡಲಾಗಿಲ್ಲ. ಪರಿಣಾಮ ದಾನಿಗಳ ವಂಶಸ್ಥರು ಶಾಲೆಗಳ ಜಾಗವನ್ನು ವಶಕ್ಕೆ ಪಡೆಯುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಮುಚ್ಚಲು ಕಾರಣರಾಗುತ್ತಿದ್ದಾರೆ. ಆದ್ದರಿಂದ ಶಾಲೆಗಳಿರುವ ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ನೋಂದಾಯಿಸಿಕೊಳ್ಳುವ ಕೆಲಸವಾಗಬೇಕಿದೆ. ಪ್ರಾಥಮಿಕ ಶಾಲೆಗಳಿಗೆ ೪೫ ಸಾವಿರ ಶಿಕ್ಷಕರ ಕೊರತೆ ಇದೆ. ೨೦೨೫ ಕ್ಕೆ ಮತ್ತೆ ೩೫ ಸಾವಿರ ಶಿಕ್ಷಕರು ನಿವೃತ್ತರಾಗಲಿದ್ದಾರೆ. ಕೊಡಲೇ ೭೫ ಸಾವಿರ ಶಿಕ್ಷಕರ ನೇಮಕ ಮಾಡದಿದ್ದರೆ ಪ್ರಾಥಮಿಕ ಶಿಕ್ಷಣ ಪಡೆಯುವುದು ಬಡ ಮಕ್ಕಳಿಗೆ ದುಬಾರಿಯಾಗಲಿದೆ ಎಂದರು.ಕರ್ನಾಟಕದಲ್ಲಿ ೨೧೯ ಭಾಷೆಗಳಿವೆ. ಭಾಷೆಗಳೆಂಬುದು ಬಣ್ಣದ ರಂಗೋಲಿ. ಹೆಚ್ಚು ಭಾಷೆಗಳಿದ್ದಷ್ಟು ದೇಶದ ಪರಂಪರೆ ಚೆನ್ನಾಗಿರಲಿದೆ. ೨೦೦೧ರಲ್ಲಿ ಕೊಡವ ಭಾಷೆ ಮಾತನಾಡುವವರ ಸಂಖ್ಯೆ ೧.೫ ಲಕ್ಷ. ಆದರೆ, ೨೦೧೧ರ ವೇಳೆಗೆ ಈ ಭಾಷೆ ಮಾತನಾಡುವವರ ಸಂಖ್ಯೆ ೧ ಲಕ್ಷಕ್ಕೆ ಕುಸಿದಿದೆ. ಭಾಷೆಯ ಬಗ್ಗೆ ಅದಮ್ಯ ಪ್ರೀತಿ ಇಲ್ಲದ ಕಾರಣ ಈಗಾಗಲೇ ಹಲವು ಸಣ್ಣಪುಟ್ಟ ಭಾಷೆಗಳು ನಾಶವಾಗಿವೆ, ಇದು ಆತಂಕಕಾರಿ ಬೆಳವಣಿಗೆ. ಇದೇ ಹಾದಿಯನ್ನು ಕನ್ನಡಭಾಷೆ ಸಹ ಅನುಭವಿಸುತ್ತಿದೆ. ಹಿಂದಿ ಸೇರಿದಂತೆ ಉತ್ತರ ಭಾರತದ ಭಾಷೆಗಳು ಮಾತ್ರ ವೇಗವಾಗಿ ಬೆಳೆಯುತ್ತಿದೆ. ಆದ್ದರಿಂದ ಕನ್ನಡ ಭಾಷೆ ಉಳಿಸಿ ಬೆಳಸುವ ಬಗ್ಗೆ ದೀರ್ಘ ಚರ್ಚೆ ನಡೆಯಬೇಕಿದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರಸಾದ್ ರಕ್ಷಿಧಿ ಮಾತನಾಡಿ, ತಾಲೂಕಿನ ಪರಿಸರ ರಕ್ಷಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸವಾಗಬೇಕಿದೆ. ಸಣ್ಣ ಪ್ರಮಾಣದಲ್ಲಿನ ನಮ್ಮ ವಿರೋಧವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ತಾಲೂಕಿನಲ್ಲಿ ದೊಡ್ಡದೊಡ್ಡ ಯೋಜನೆಗಳು ತಲೆ ಎತ್ತಲು ಸಾಧ್ಯವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ಪ್ರಮಾದಗಳು ತಲೆ ಎತ್ತಲು ಅವಕಾಶ ನೀಡಬಾರದು ಎಂದರು.
ಸರಿಯಾಗಿ ಎರಡು ಗಂಟೆಗಳ ಕಾಲ ನಡೆದ ಮೆರವಣಿಗೆ ಕಾಡಾನೆಗಳ ಸೆರೆ ಸಂದರ್ಭದಲ್ಲಿ ನಡೆದ ಕಾದಾಟದಲ್ಲಿ ಮೃತಪಟ್ಟ ಅರ್ಜುನ ಆನೆಯ ನೆನಪಿಗಾಗಿ ನಿರ್ಮಿಸಿದ್ದ ದ್ವಾರದ ಮೂಲಕ ಸಮ್ಮೇಳನಾಧ್ಯಕ್ಷರನ್ನು ವೇದಿಕೆಗೆ ಕರೆತರಲಾಯಿತು. ಅಭಿವೃದ್ಧಿ ಹರಿಕಾರ ಎಂದು ಗುರುತಿಸಿಕೊಂಡಿದ್ದ ಬೈಕೆರೆ ನಾಗೇಶ್ ವೇದಿಕೆಯಲ್ಲಿ ವಿಜೃಂಭಣೆಯಿಂದ ಆರಂಭವಾದ ಕಾರ್ಯಕ್ರಮವಕ್ಕೆ ಬಾಗೆ ಜೆ.ಎಸ್.ಎಸ್ ಶಾಲೆಯ ಮಕ್ಕಳ ನಡೆಸಿಕೊಟ್ಟ ನೃತ್ಯ ಮೆರುಗು ನೀಡಿತ್ತು. ಮಧ್ಯಾಹ್ನದ ನಂತರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ 13 ಸಾಹಿತಿಗಳನ್ನು ಒಳಗೊಂಡ ಕವಿಗೋಷ್ಠಿ ಜನಮನ ಸೆಳೆಯಲು ಯಶಸ್ವಿಯಾಯಿತು. ಮಲೆನಾಡ ಜನಜೀವನ ಹಾಗೂ ಸದ್ಯದ ಸವಾಲುಗಳ ಕುರಿತ ಸಂವಾದ ಸಮಸ್ಯೆಗಳ ಸರಮಾಲೆಯನ್ನು ಬಿಚ್ಚಿಟ್ಟಿತ್ತು.
- ಸಿಮೆಂಟ್ ಮಂಜು, ಶಾಸಕ
ಬಡವರು ಮಕ್ಕಳ ಮಾತ್ರ ಸರ್ಕಾರಿ ಶಾಲೆಗೆ ಸೇರುತ್ತಾರೆ ಎಂಬ ಮನಸ್ಥಿತಿ ಜನರಲ್ಲಿ ನೆಲೆಸಿರುವುದೇ ಕನ್ನಡ ಶಾಲೆಗಳ ಸಂಖ್ಯೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ಸಕಲೇಶಪುರ ತಾಲೂಕು ಕನ್ನಡ ಸಾಹಿತಿಗಳ ತವರಾಗಿದ್ದು, ನೂರಕ್ಕೂ ಅಧಿಕ ಸಾಹಿತಿಗಳು ನಮ್ಮ ನೆಲದಿಂದ ಹುಟ್ಟಿಬಂದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ನಡೆಸಲು ಮಲೆನಾಡಿನಲ್ಲಿ ಸಾಕಷ್ಟು ವಿಷಯಗಳಿದ್ದು ಸೂಕ್ಷ್ಮ ಮನಸ್ಥಿತಿ ಸಾಹಿತ್ಯಕ್ಕೆ ಅಗತ್ಯವಿದೆ.