ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಏಕೀಕರಣ ಹೋರಾಟ ಮತ್ತು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಡಿ.೧೬ ರಂದು ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಈ ಮುತ್ತಿಗೆ ಹಾಕಲಾಗುವುದು ಎಂದರು. ಪ್ರಸಕ್ತ ಸಾಲಿನ ಕಬ್ಬಿಗೆ ₹೫೫೦೦ನಿಗದಿ ಮಾಡಬೇಕು. ಕಳೆದ ಸಾಲಿನ ₹೯೫೦ ಕೋಟಿ ರೈತರಿಗೆ ತಕ್ಷಣ ಕೊಡಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಬಗರ್‌ಹುಕುಂ ಸಾಗುವಳಿದಾರರ ಸಾಗುವಳಿ ಚೀಟಿಯನ್ನು ತಕ್ಷಣ ನೀಡಬೇಕು. ಇಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ಮಾಡಬೇಕು. ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು. ಕೃಷಿ ವಿದ್ಯುತ್ ಖಾಸಗೀಕರಣ ಮಾಡುವುದನ್ನು ತಕ್ಷಣ ಕೈ ಬಿಟ್ಟು ಅಕ್ರಮ ಸಕ್ರಮ ಯೋಜನೆ ಮರು ಜಾರಿ ಮಾಡಬೇಕು ಎಂದರು.ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರನ್ನು ಪರಿಗಣಿಸಬಾರದು. ಆರ್‌ಟಿಸಿಗಳಲ್ಲಿ ವಕ್ಫ್ ಮಂಡಳಿಯ ಹೆಸರು ಬಂದಿರುವುದನ್ನು ತಿದ್ದುಪಡಿ ಮಾಡಲು ಆದೇಶವನ್ನು ಗೆಜೆಟ್ ನೋಟಿಫಿಕೇಶನ್ ಅಲ್ಲಿ ಪ್ರಕಟಿಸಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದಿರುವ ರೈತರಿಗೆ ವೈಜ್ಞಾನಿಕವಾಗಿ ಬೆಳೆ ನಷ್ಟ ನೀಡಬೇಕು ಅತಿವೃಷ್ಟಿ ಅನಾವೃಷ್ಟಿಯಿಂದ ನೊಂದಿರುವ ರೈತರಿಗೆ ವೈಜ್ಞಾನಿಕವಾಗಿ ಬೆಳೆ ನಷ್ಟ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ನಬಾರ್ಡ್ ಕೃಷಿ ಸಾಲಕ್ಕೆ ಕೊಡುವ ಯೋಜನೆಗಳನ್ನು ಕಡಿತಗೊಳಿಸಿರುವುದನ್ನು ಪುನರ್ ಪರಿಶೀಲನೆ ಮಾಡಿಕೊಳ್ಳಬೇಕು.
ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು. ಕೃಷಿ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಾಡುವುದರಲ್ಲಿ ರೈತರನ್ನು ಜಾಯಿಂಟ್ ವೆಂಚರ್ ಎಂದು ಪರಿಗಣಿಸಿ ರೈತರ ಪಾಲುದಾರರಾಗಿ ಮುಂದುವರಿಸಬೇಕು ಎಂದರು.ರಾಜ್ಯದಲ್ಲಿ ಬೆಳೆದಿರುವ ರೈತರ ಭತ್ತವನ್ನು ಸಂಪೂರ್ಣವಾಗಿ ಖರೀದಿ ಮಾಡಬೇಕು. ಕೇಂದ್ರ ಸರ್ಕಾರದ ಎಂಎಸ್‌ಪಿ ಜೊತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ₹೫೦೦ ಹೆಚ್ಚುವರಿ ಪ್ರೋತ್ಸಾಹ ಧನ ನೀಡಬೇಕು. ಅರಣ್ಯದಂಚಿನಲ್ಲಿರುವ ರೈತರ ಕೃಷಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುವುದನ್ನು ಕೈಬಿಡಬೇಕು. ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರವಾಗಿ ಹಗಲು ವೇಳೆ ೧೦ ಗಂಟೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ರೈತರು ಸ್ವಯಂ ಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ ಉಡಿಗಾಲ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ಮುಖಂಡರಾದ ಪ್ರಕಾಶ್ ಗಾಂಧಿ, ಗುರುವಿನಪುರ ಗ್ರಾಮ ಘಟಕದ ಅಧ್ಯಕ್ಷ ಮೋಹನ್, ತಮಡಹಳ್ಳಿ ದಿನೇಶ್, ವಿನಯ್ ಇದ್ದರು.