ಕನ್ನಡಪ್ರಭ ವಾರ್ತೆ ಸೋಮವಾರಪೇಟೆ ಕಳೆದ ಅಕ್ಟೋಬರ್‌ನಲ್ಲಿ ನಡೆದ ವಾಣಿಜ್ಯ ಮಳಿಗೆಗಳ ಹರಾಜನ್ನು ರದ್ದುಪಡಿಸಿ, ಮರು ಇ-ಟೆಂಡರ್ ಮಾಡಬೇಕೆಂದು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ಆಗ್ರಹಿಸಿದರು.ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಪಂಚಾಯಿತಿ ಕಚೇರಿಯಲ್ಲಿ ಗೌಪ್ಯವಾಗಿರಬೇಕಾದ ಮಾಹಿತಿಗಳು ಸೋರಿಕೆಯಾಗಿರುವ ಕಾರಣ ಮಧ್ಯವರ್ತಿಗಳು ಡೀಲ್‌ಗೆ ಇಳಿಯಲು ಕಾರಣವಾಗಿದೆ. ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಮಾಹಿತಿ ಸೋರಿಕೆ ಮಾಡಿದ್ದಾರೆ. ಟೆಂಡರ್‌ದಾರರ ಹೆಸರು, ಮಳಿಗೆ ಸಂಖ್ಯೆಗಳು ಮಧ್ಯವರ್ತಿಗಳ ಕೈಸೇರಿವೆ. ಈ ಬಗ್ಗೆ ಅಧ್ಯಕ್ಷರು ವಿವರಣೆ ನೀಡಬೇಕು, ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಿ ನಾಮನಿರ್ದೇಶನ ಸದಸ್ಯ ಡಿ.ಯು. ಕಿರಣ್ ಏರು ಧನಿಯಲ್ಲಿ ಆಗ್ರಹಿಸಿದರು. ನಾಮನಿರ್ದೇಶನ ಸದಸ್ಯ ವಿನಯ್, ಸದಸ್ಯರಾದ ಶೀಲಾ ಡಿಸೋಜ, ಬಿ.ಸಿ.ವೆಂಕಟೇಶ್, ಬಿ.ಸಂಜೀವ, ಜೀವನ್ ಇದಕ್ಕೆ ಧ್ವನಿಗೂಡಿಸಿದರು. ನಿಯಮದಂತೆ ಟೆಂಡರ್ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದೆ, ಬಿಡ್‌ದಾರರ ಹೆಸರು ಸೋರಿಕೆಯಾಗಿರುವುದು ತಮ್ಮ ಗಮನಕ್ಕೆ ಬಂದಿದೆ. ಸದಸ್ಯರ ಆರೋಪವೂ ಸರಿಯಾಗಿದೆ. ಸದಸ್ಯರ ತೀರ್ಮಾನದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.ಸೋಮವಾರಪೇಟೆ ಪಟ್ಟಣದಲ್ಲಿ ಸಂತೆ ದಿನ ಟ್ರಾಫಿಕ್ ಸಮಸ್ಯೆ ಹೆಚ್ಚಿದೆ. ಸಾರ್ವಜನಿಕರಿಗೆ ದೊಡ್ಡಮಟ್ಟದ ಕಿರಿಕಿರಿ ಆಗುತ್ತಿದೆ. ಪಟ್ಟಣದಲ್ಲಿ ಪೊಲೀಸರು ಇದ್ದಾರೋ ಇಲ್ಲವೋ ಎಂಬಂತಿದೆ. ಪೊಲೀಸರು ಇನ್ನಾದರೂ ಕ್ರಮಕೈಗೊಳ್ಳದಿದ್ದರೆ ಶಾಸಕರಿಗೆ ನೇರವಾಗಿ ದೂರು ನೀಡಲು ಸಭೆ ತೀರ್ಮಾನಿಸಿತು.
ಜೇಸಿ ವೇದಿಕೆಯ ಮುಂಭಾಗ ಹೆಚ್ಚಿನ ಬಾಡಿಗೆ ಕೊಟ್ಟು ವಾಣಿಜ್ಯ ಮಳಿಗೆಗಳನ್ನು ಪಡೆದುಕೊಂಡಿದ್ದಾರೆ. ಮಳಿಗೆಗಳ ಮುಂದೆ ದಿನವಿಡಿ ಆಟೋಗಳನ್ನು ನಿಲ್ಲಿಸಿದರೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ಆಟೋಗಳು ನಿಲ್ಲಲು ನಿಗದಿತ ಸ್ಥಳವನ್ನು ಗುರುತಿಸಿಕೊಡಬೇಕು. ಪಂಚಾಯಿತಿ ನಿಯಮವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಲು ಸದಸ್ಯರು ಆಗ್ರಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಬಿ.ಆರ್.ಮಹೇಶ್ ಅವಿರೋಧ ಆಯ್ಕೆಯಾದರು. ವರ್ಗಾವಣೆಗೊಂಡಿರುವ ಮುಖ್ಯಾಧಿಕಾರಿ ನಾಚಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಪಿ.ಕೆ. ಚಂದ್ರ, ನಾಗರತ್ನ, ಶುಭಾಕರ್, ಎಚ್.ಎ.ನಾಗರಾಜ್ ಮುಖ್ಯಾಧಿಕಾರಿ ಸತೀಶ್ ಇದ್ದರು.