ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ

KannadaprabhaNewsNetwork | Published : Dec 14, 2024 12:48 AM

ಸಾರಾಂಶ

ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಆಶಯದಂತೆ ಬೆಳಗಾವಿಯಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ‌ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಆಶಯದಂತೆ ಬೆಳಗಾವಿಯಲ್ಲಿ ಸುಸಜ್ಜಿತ ಪತ್ರಿಕಾ ಭವನ ನಿರ್ಮಾಣ‌ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿ ಶುಕ್ರವಾರ ಪತ್ರಿಕಾ ಭವನ‌ ಹಾಗೂ ತೋಟಗಾರಿಕೆ ಇಲಾಖೆ‌ ಕಚೇರಿ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸುವ ಮೂಲಕ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಅದೇ ರೀತಿ ಅಗತ್ಯ ಅನುದಾನ ಒದಗಿಸುವ ಮೂಲಕ ಸುಸಜ್ಜಿತ ಪತ್ರಿಕಾ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.ಇದೇ ಸ್ಥಳದಲ್ಲಿ ತೋಟಗಾರಿಕೆ ಇಲಾಖೆಯ ಕಟ್ಟಡ‌ ನಿರ್ಮಾಣ‌ ಮಾಡುವುದರ ಮೂಲಕ‌ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲಾಗುವುದು. ಇಂತಹ ಉತ್ತಮ ಕಟ್ಟಡಗಳನ್ನು ನಿರ್ಮಿಸುವುದರಿಂದ 2ನೇ ರಾಜಧಾನಿ ಬೆಳಗಾವಿಯನ್ನು ಅಭಿವೃದ್ಧಿ‌ಪಡಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಬೆಳಗಾವಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಉತ್ತಮ‌‌ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಸಂತಸದ ಸಂಗತಿ. ಇದರಿಂದ ಬೆಳಗಾವಿ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಮಾತನಾಡಿ, ಪತ್ರಿಕಾಭವನದ ಶಂಕುಸ್ಥಾಪನೆಯ ಮೂಲಕ ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಕನಸು ನನಸಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಬೆಳಗಾವಿ ಉತ್ತರ ಶಾಸಕ ಆಸೀಫ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ, ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್‌, ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್‌.ರಮೇಶ, ಮೇಯರ್‌ ಸವಿತಾ ಕಾಂಬಳೆ, ಡಿಸಿ ಮೊಹಮ್ಮದ್ ರೋಷನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ ಶಿಂಧೆ, ಸರ್ವೋತ್ತಮ ಜಾರಕಿಹೊಳಿ, ಸಾರ್ವಜನಿಕ ಸಂಪರ್ಕ ಇಲಾಖೆಯ ಜಂಟಿ‌ ನಿರ್ದೇಶಕ ಮಂಜುನಾಥ್ ಡೊಳ್ಳಿನ, ಹಿರಿಯ ಸಹಾಯಕ ನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಬೆಳಗಾವಿಯ ಸಮಸ್ತ ಪತ್ರಿಕಾ‌ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಚಿವ ಸತೀಶ, ಡಿಸಿ ರೋಷನ್‌ಗೆ ಸನ್ಮಾನ

ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಬೆಳಗಾವಿ ಪತ್ರಕರ್ತರ ಪರವಾಗಿ ಪತ್ರಕರ್ತರಾದ ದಿಲೀಪ ಕುರಂದವಾಡೆ, ಶ್ರೀಶೈಲ ಮಠದ ಮತ್ತು ಮಂಜುನಾಥ ಪಾಟೀಲ, ಪುಂಡಲೀಕ ಬಾಳೋಜಿ ಸನ್ಮಾನಿಸಿದರು. ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಒದಗಿಸುವ ಮೂಲಕ ಅನೇಕ ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಅದೇ ರೀತಿ ಅಗತ್ಯ ಅನುದಾನ ಒದಗಿಸುವ ಮೂಲಕ ಸುಸಜ್ಜಿತ ಪತ್ರಿಕಾ ನಿರ್ಮಾಣ ಮಾಡಲಾಗುವುದು.

-ಸತೀಶ ಜಾರಕಿಹೊಳಿ,

ಜಿಲ್ಲಾ ಉಸ್ತುವಾರಿ ಸಚಿವರು.ಪತ್ರಿಕಾ ಭವನ‌ ಹಾಗೂ ತೋಟಗಾರಿಕೆ ಇಲಾಖೆ ಕಚೇರಿ ಕಟ್ಟಡಗಳು ಸುಸಜ್ಜಿತ ಕಟ್ಟಡಗಳಾಗುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಂತಾಗಲಿ.

-ಎಸ್.ಎಸ್.ಮಲ್ಲಿಕಾರ್ಜುನ,
ತೋಟಗಾರಿಕೆ ಇಲಾಖೆ ಸಚಿವರು.ಪತ್ರಿಕಾಭವನದ ಶಂಕುಸ್ಥಾಪನೆಯ ಮೂಲಕ ಮಾಧ್ಯಮ ಪ್ರತಿನಿಧಿಗಳ ಬಹುದಿನಗಳ ಕನಸು ನನಸಾಗುತ್ತಿದೆ.

-ಗುರುನಾಥ ಕಡಬೂರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರು.

Share this article