ಹೊಯ್ಸಳೇಶ್ವರ ದೇವಸ್ಥಾನಕ್ಕೆ ಸದ್ಯದಲ್ಲೇ ಕಾಂಕ್ರೀಟ್ ರಸ್ತೆ

KannadaprabhaNewsNetwork | Published : May 28, 2024 1:04 AM

ಸಾರಾಂಶ

ಹೊಯ್ಸಳೇಶ್ವರ ದೇವಸ್ಥಾನ ರಸ್ತೆ, ಬಸ್ತೀಹಳ್ಳಿ ಮುಖ್ಯ ರಸ್ತೆ ಹಾಗೂ ದ್ವಾರಸಮುದ್ರದ ಕೆರೆಯ ಕೋಡಿವರೆಗೆ ಸದ್ಯದಲ್ಲೇ ಸಿಮೆಂಟ್‌ನ ಕಾಂಕ್ರೀಟ್ ರಸ್ತೆ ಪ್ರಾರಂಭವಾಗಲಿದೆ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು. ಹಳೇಬೀಡಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು.

ಶಾಸಕ ಎಚ್‌.ಕೆ.ಸುರೇಶ್‌ ಮಾಹಿತಿ । ದೇವಸ್ಥಾನ ರಸ್ತೆ, ಬಸ್ತೀಹಳ್ಳಿ ಮುಖ್ಯ ರಸ್ತೆ, ದ್ವಾರಸಮುದ್ರದ ಕೆರೆವರೆಗೆ ಸಿಮೆಂಟ್‌

ಕನ್ನಡಪ್ರಭ ವಾರ್ತೆ ಹಳೇಬೀಡು

ಹಳೇಬೀಡಿನ ಮುಖ್ಯ ರಸ್ತೆ ಅಂದರೆ ಶ್ರೀ ಹೊಯ್ಸಳೇಶ್ವರ ದೇವಸ್ಥಾನ ರಸ್ತೆ, ಬಸ್ತೀಹಳ್ಳಿ ಮುಖ್ಯ ರಸ್ತೆ ಹಾಗೂ ದ್ವಾರಸಮುದ್ರದ ಕೆರೆಯ ಕೋಡಿವರೆಗೆ ಸದ್ಯದಲ್ಲೇ ಸಿಮೆಂಟ್‌ನ ಕಾಂಕ್ರೀಟ್ ರಸ್ತೆ ಪ್ರಾರಂಭವಾಗಲಿದೆ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಳೇಬೀಡು ಹೊಯ್ಸಳರ ನಾಡು, ಈ ಹಿಂದೆ ರಾಜಧಾನಿಯಾಗಿ ಮೆರೆದಂತಹ ಸ್ಥಳವಾಗಿದ್ದ ಹಳೇಬೀಡು, ಬೇಲೂರು ಕ್ಷೇತ್ರ ನನ್ನ ಪಾಲಿಗೆ ಒಂದು ಅದ್ಭುತವಾದ ಕ್ಷೇತ್ರವಾಗಿದೆ. ಇದರ ಅಭಿವೃದ್ಧಿ ಕಾಣುವುದು ನನ್ನ ಉದ್ದೇಶ. ಆದ್ದರಿಂದ ಹಳೇಬೀಡಿನ ಪ್ರಮುಖ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ದೇವಸ್ಥಾನದ ಪ್ರಮುಖ ರಸ್ತೆಯನ್ನು ೨೫ ಮೀಟರ್ ಅಗಲೀಕರಣ ಮಾಡುವುದರಲ್ಲಿ ಕೆಲಸ ಪ್ರಾರಂಭಿಸುವ ಮುನ್ನ ಸ್ಥಳೀಯ ಜನತೆಯನ್ನು ಕರೆಸಿ ಇದರ ವಿಚಾರವಾಗಿ ಮಾತನಾಡಿದಾಗ ಒಪ್ಪಿಗೆ ನೀಡಿದ್ದರು. ಇನ್ನು ಕೆಲವರು ಒಪ್ಪಿಗೆ ನೀಡದೆ ನ್ಯಾಯಾಲಯ ಮೆಟ್ಟಿಲು ಹತ್ತಿದ್ದಾರೆ. ಇದರಿಂದ ಕೆಲಸ ಅರ್ಧಕ್ಕೆ ಸ್ಥಗಿತವಾಗಿದ್ದು ಬೇಸರವಾಗಿದೆ. ಏಕೆಂದರೆ ಇಲ್ಲಿ ಬರುವ ಪ್ರವಾಸಿಗರಿಗೆ ತೊಂದರೆ ಆಗದಂತೆ ಅರ್ಧ ಭಾಗದ ೧೨.೫ ಮೀಟರ್ ಅಲ್ಲಿ ಕಾಮಗಾರಿಯನ್ನು ಪ್ರಾರಂಬಿಸಿ ನಂತರ ಉಳಿದ ಅರ್ಧ ಭಾಗ ೧೨.೫ ಮೀಟರ್‌ ಕೆಲಸ ಪ್ರಾರಂಭವಾಗುತ್ತದೆ. ಇದನ್ನು ಹೆಬ್ಬಾಳು ಮಾದರಿಯಲ್ಲಿ ರಸ್ತೆ ಹಾಗೂ ಲೈಟಿಂಗ್ ಮಾಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಬಂದ ಮಳೆಯಲ್ಲಿ ಬೇಲೂರು ತಾಲೂಕಿನಲ್ಲಿ ಹೆಚ್ಚು ಮಳೆ ಬಿದ್ದಿರುವುದು ಸಂತೋಷದ ವಿಚಾರ. ರೈತರಲ್ಲಿ ಮಂದಹಾಸ ಬೀರಿದೆ. ಜನರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆಗಳನ್ನು ಬೆಳೆಯುವದರಲ್ಲಿ ಮಗ್ನರಾದ್ದಾರೆ. ಮೂರು ನಾಲ್ಕು ದಿನದಿಂದ ಮಳೆ, ಗಾಳಿಗಳಿಂದ ವಿದ್ಯುತ್ ಕಂಬಗಳು, ಮನೆಯ ಹಂಚುಗಳು, ಶೀಟುಗಳು ಹಾರಿ ಹೋಗಿ ತೊಂದರೆಯಾಗಿದೆ. ಇನ್ನು ಕೆಲವೂ ಸ್ಥಳದಲ್ಲಿ ನೀರು ನುಗ್ಗಿ ತೊಂದರೆ ಆಗಿದ್ದು ಇದರ ವಿಚಾರವಾಗಿ ಸ್ಥಳಕ್ಕೆ ಭೇಟಿ ನೀಡಿ ಹಳೇಬೀಡು ಹೋಬಳಿಯ ಅಡಗೂರು, ಗೋಣೀಸೋಮನಹಳ್ಳಿ, ಸಿದ್ದಾಪುರ ಹಾಗೂ ಹಳೇಬೀಡಿನ ಪ್ರಮುಖ ಬಡಾವಣೆಗಳಲ್ಲಿ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹಳೇಬೀಡಿನ ಒಂದನೇ ಬ್ಲಾಕಿನ ಬಡಾವಣೆಯಲ್ಲಿ ಎರಡು ಕೋಟಿ ರು. ಹಣದ ಅನುದಾನದಲ್ಲಿ ಕೆಲಸ ಪ್ರಾರಂಭವಾಗಿದ್ದು ಅದರ ಸ್ಥಳ ಪರಿಶೀಲನೆ ನಡೆಸಲಾಗಿದೆ. ಕೆಲವೊಂದು ಭಾಗದಲ್ಲಿ ಕೆಲಸ ಸಮರ್ಪಕವಾಗದೆ ತೊಂದರೆ ಆಗಿದೆ ಎಂದು ಜನರ ದೂರಿನ ಮೇಲೆ ಸ್ಥಳಕ್ಕೆ ಧಾವಿಸಿ, ಅಲ್ಲಿ ಅಧಿಕಾರಿಗಳಿಗೆ ಶಾಸಕ ಎಚ್‌.ಕೆ. ಸುರೇಶ್‌ ಸೂಚನೆ ನೀಡಿದರು.

ಕೆಲಸವನ್ನು ಸಮರ್ಪಕವಾಗಿ ಮಾಡಬೇಕು ಕೆಲಸದಲ್ಲಿ ಲೋಪವಾಗದೆ ಅಚ್ಚುಕಟ್ಟಾಗಿ ಕೆಲಸ ಮಾಡಬೇಕೆಂದು ತಿಳಿಸಿದರು. ಕರಿಯಮ್ಮ ದೇವಸ್ಥಾನದ ಬೀದಿಯಲ್ಲಿ ಕೆಲವು ಮನೆಗಳಿಗೆ ಮಳೆಯಿಂದ ನೀರು ನುಗ್ಗಿ ತೊಂದರೆ ಆಗಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಕ್ಷಣ ಚರಂಡಿ ವ್ಯವಸ್ಥೆ ಮಾಡಿಕೊಡಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಪರಮೇಶ್, ವಿನಯ್, ರಂಜಿತ್, ಬಸ್ತಿಹಳ್ಳಿ ಸೋಮಶೇಖರ್, ಶಿವನಾಗ್, ಯೋಗೀಶ್, ಚೇತನ್, ಇಲಾಖೆಯ ಅಧಿಕಾರಿಗಳಾದ ಸೋಮಶೇಖರ್, ಮಹೇಶ್ ಹಾಜರಿದ್ದರು.

Share this article