ದಲಿತ ಯುವಕನ ಹತ್ಯೆ ಖಂಡಿಸಿ ಸೆ. 17, 18ಕ್ಕೆ ಜಾಥಾ

KannadaprabhaNewsNetwork | Published : Sep 14, 2024 1:48 AM

ಸಾರಾಂಶ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ, ದಲಿತ ದಮನಿತರ ರಕ್ಷಣೆಗೆ ಒತ್ತಾಯಿಸಿ ಸೆ. 17, 18ರಂದು ಕೊಪ್ಪಳದ ಡಿಸಿ ಕಚೇರಿಯಿಂದ ಸಂಗನಾಳದ ವರೆಗೂ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷ ಬಸವರಾಜ ಸೂಳಿಭಾವಿ ಹೇಳಿದರು.

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ, ದಲಿತ ದಮನಿತರ ರಕ್ಷಣೆಗೆ ಒತ್ತಾಯಿಸಿ ಸೆ. 17, 18ರಂದು ಕೊಪ್ಪಳದ ಡಿಸಿ ಕಚೇರಿಯಿಂದ ಸಂಗನಾಳದ ವರೆಗೂ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷ ಬಸವರಾಜ ಸೂಳಿಭಾವಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗನಾಳದಲ್ಲಿ ಕ್ಷೌರ ಮಾಡುವ ಕಾರಣಕ್ಕೆ ಯುವಕನ ಕೊಲೆಯಾಗಿದೆ. ಇನ್ನು ವಿಠಲಾಪುರದಲ್ಲಿ ದಲಿತ ಮಹಿಳೆಯ ಸಾವಾಗಿದೆ. ಹೀಗೆ ಜಿಲ್ಲೆಯಲ್ಲಿ ದಲಿತರ, ದಮನಿತರ ಮೇಲೆ ದೌರ್ಜನ್ಯವು ನಡೆಯುತ್ತಲೇ ಇವೆ. ಕಳೆದ ಎರಡು ವರ್ಷದಲ್ಲಿ ಪ್ರತಿ ವಾರಕ್ಕೊಂದು ದಲಿತರ, ದಮನಿತರ ಹತ್ಯೆ, ದೌರ್ಜನ್ಯಗಳು ನಡೆಯುತ್ತಿವೆ. ಇದೆಲ್ಲವನ್ನು ಸರ್ಕಾರ ಅವಲೋಕಿಸಿ ಜಿಲ್ಲೆಯನ್ನು ದಲಿತ ದಮನಿತರ ದೌರ್ಜನ್ಯ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲಿ ಎಂದು ಒತ್ತಾಯಿಸಿದರು.

ಬೇರೆ ಜಿಲ್ಲೆಯಲ್ಲಿ ಇಂಥ ಘಟನೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಕೊಪ್ಪಳದಲ್ಲಿ ಮಾತ್ರವೇ ಇಷ್ಟೊಂದು ಘಟನೆಗಳು ನಡೆಯುತ್ತಿವೆ. ಇದಲ್ಲದೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಜನರು ಸಮಸ್ಯೆಯಲ್ಲಿದ್ದಾರೆ. ಇಲ್ಲಿ ಕಲ್ಯಾಣವಾಗಿಲ್ಲ, ಹಾಗಾಗಿ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲು ಮಾಡಿ ಹೈದರಾಬಾದ್ ಕರ್ನಾಟಕ ಎಂದೇ ಹೆಸರಿಡಲಿ. ಇನ್ನು ಜಾತಿ ನಿಂದನೆ ಪ್ರಕರಣಕ್ಕೆ ಕೌಂಟರ್ ಪ್ರಕರಣ ದಾಖಲಾಗುತ್ತಿದ್ದು ಕೌಂಟರ್ ಪ್ರಕರಣ ನಡೆಯದಂತೆ ರದ್ದುಪಡಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕು. ದಲಿತರಿಗೆ ಭೂಮಿ ಕೊಡುವ ಕೆಲಸ ಆಗಬೇಕು. ದಲಿತರಿಗೆ ಪರ್ಯಾಯ ಉದ್ಯೋಗ ಕೊಡುವ ವ್ಯವಸ್ಥೆ ಆಗಬೇಕು. ಮೇಲ್ಜಾತಿಯ ಗುಲಾಮಗಿರಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಬಸವರಾಜ ಶೀಲವಂತರ ಮಾತನಾಡಿ, ಸೆ.17 ರಂದು ಡಿಸಿ ಕಚೇರಿಯಿಂದ ಜಾಥಾ ಆರಂಭವಾಗಿ, ಭಾನಾಪುರದಲ್ಲಿ ವಾಸ್ತವ್ಯ ಮಾಡಿ ಸೆ.18ಕ್ಕೆ ಸಂಗನಾಳ ತಲುಪಿ ಬಳಿಕ ಅಲ್ಲಿ ಸೌಹಾರ್ದ ಸಮಾವೇಶ ಮಾಡಲಿದ್ದೇವೆ. ಈ ಸಮಾವೇಶಕ್ಕೆ ವಿವಿಧ ಚಿಂತಕರು ಆಗಮಿಸಲಿದ್ದಾರೆ ಎಂದರು.

ಮುಖಂಡ ಅಲ್ಲಮಪ್ರಭು ಬೆಟ್ಟದೂರು, ಹೋರಾಟಗಾರ ಡಿ.ಎಚ್. ಪೂಜಾರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಮಾನವ ಬಂಧುತ್ವ ವೇದಿಕೆಯ ಟಿ. ರತ್ನಾಕರ ಇದ್ದರು.

Share this article