ಹೈನುಗಾರರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಹಾಲಿನ ದರ ಹೆಚ್ಚಳ

KannadaprabhaNewsNetwork |  
Published : Sep 14, 2024, 01:48 AM ISTUpdated : Sep 14, 2024, 08:41 AM IST
ಸಿಎಂ ಸಿದ್ದರಾಮಯ್ಯ | Kannada Prabha

ಸಾರಾಂಶ

ಹೈನುಗಾರರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಹೆಚ್ಚಳ ಮಾಡಿದ ದರವನ್ನೆಲ್ಲ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

 ಮಾಗಡಿ (ರಾಮನಗರ) :  ಹೈನುಗಾರರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಮತ್ತೊಮ್ಮೆ ಹಾಲಿನ ದರ ಹೆಚ್ಚಳ ಮಾಡಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಹೆಚ್ಚಳ ಮಾಡಿದ ದರವನ್ನೆಲ್ಲ ರೈತರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ನೆರವೇರಿಸಿ ಶುಕ್ರವಾರ ಮಾತನಾಡಿದ ಅವರು, ನೀವು (ರೈತರು) ನಮ್ಮ ಪರ ಮಾತನಾಡುತ್ತೀರಿ ಅನ್ನುವುದಾದರೆ ಹಾಲಿನ ದರ ಹೆಚ್ಚಳ ಮಾಡುತ್ತೇನೆ ಎಂದರು. ಇದಕ್ಕೆ ಸಭಿಕರ ಸಾಲಿನಲ್ಲಿದ್ದ ರೈತರಿಂದ ಚಪ್ಪಾಳೆಯೊಂದಿಗೆ ಬೆಂಬಲ ಸಿಕ್ಕಾಗ, ಹಾಲಿನ ದರ ಹೆಚ್ಚಳ ಮಾಡುತ್ತೇವೆ. ಹೆಚ್ಚಳ ಮಾಡಿದ ಹಣವನ್ನೆಲ್ಲ ಹೈನುಗಾರರಿಗೇ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಹಾಲಿನ ದರ ಹೆಚ್ಚಳದ ಜೊತೆಗೆ ಡೇರಿಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಕೊಡುವಂತೆ ಹಾಲು ಒಕ್ಕೂಟದವರು ಕೇಳುತ್ತಿದ್ದಾರೆ. ಈ ಸಂಬಂಧ ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಈ ಹಿಂದೆ ಸಹಕಾರ ಸಚಿವ ರಾಜಣ್ಣನವರು ಹಾಲಿನ ದರ ಹೆಚ್ಚಳ ಮಾಡುವಂತೆ ಹೇಳಿದ್ದರು. ಇದಕ್ಕೆ ವಿಪಕ್ಷಗಳು ಬಾಯಿ ಬಡಿದುಕೊಂಡರು. ಇದನ್ನು ನೀವು ಜೋರಾಗಿ ಪ್ರಶ್ನೆ ಮಾಡಬೇಕಿತ್ತಲ್ಲವೇ ಎಂದ ಸಿದ್ದರಾಮಯ್ಯ, ಅಷ್ಟಕ್ಕೂ ಹಾಲಿಗೆ 5 ರು. ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದು ಯಾರು? ಕುಮಾರಸ್ವಾಮಿನಾ, ಬೊಮ್ಮಾಯಿನಾ? ಆ ಕೆಲಸ ಮಾಡಿದ್ದು ನಾನು. ಸರ್ಕಾರಿ ಶಾಲೆ ಮಕ್ಕಳಿಗೆ ಹಾಲು ಕೊಡಲು ಕ್ಷೀರ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದೆ. ಇದರಿಂದ ಹೈನುಗಾರರಿಗೆ ಅನುಕೂಲ ಆಯಿತು. ಹಿಂದಿನ ಸರ್ಕಾರ ಈ ಕೆಲಸ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಮಣ್ಣಿನ ಮಕ್ಕಳು, ರೈತರ ಮಕ್ಕಳು ಈ ಕೆಲಸ ಮಾಡಲಿಲ್ಲ. ನಾವು ಕುರಿಕಾಯುವವರು, ಎಮ್ಮೆ ಕಾಯುವವರು, ಆಹಾರ ಉತ್ಪಾದನೆ ಮಾಡುವವರ ಮಕ್ಕಳು. ಇವರು ಮಾತೆತ್ತಿದರೆ ನಾವು ಮಣ್ಣಿನ ಮಕ್ಕಳು ಅಂತಾರೆ, ರೈತರಿಗಾಗಿ ಇವರು ಏನು ಮಾಡಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕ ಸರ್ಕಾರವು ಕಳೆದ ಜೂನ್‌ ತಿಂಗಳಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡಿ ಪ್ರತಿ ಲೀಟರ್‌ ಹಾಲಿನ ದರ 2 ರುಪಾಯಿಯಷ್ಟು ಹೆಚ್ಚಳ ಮಾಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಲ್ಪಕಲಾ ಅಕಾಡೆಮಿ ಗೌರವ-ಶಿಲ್ಪಶ್ರೀ ಪ್ರಶಸ್ತಿ ಪ್ರಕಟ
ಹಿರಿಯ ಕವಿಗಳ ಬರಹದಿಂದ ಹೆಚ್ಚು ಪ್ರಭಾವಿತ: ಪ್ರೊ.ರಂಗಸ್ವಾಮಿ