ಕನ್ನಡಪ್ರಭ ವಾರ್ತೆ ಮದ್ದೂರು
ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿ ಪದಾಧಿಕಾರಿಗಳು, ಶ್ರೀ ಶಕ್ತಿ ಸ್ವ ಸಹಾಯ ಸಂಘಗಳ ಮಹಿಳೆಯರು ಮತ್ತು ಭಕ್ತಾದಿಗಳು ಧರಣಿ ನಡೆಸಿ ಶ್ರೀಕಂಠಯ್ಯ ವಿರುದ್ಧ ಘೋಷಣೆ ಕೂಗಿದರು. 1988ರಲ್ಲಿ ಗ್ರಾಮದ ಎಲ್ಲಾ ಜನರು ಒಗ್ಗೂಡಿ ತೋಪಿನ ತಿಮ್ಮಪ್ಪ ದೇವಾಲಯದ ಹೆಸರಿನಲ್ಲಿ ಖಾಸಗಿ ಟ್ರಸ್ಟ್ ರಚನೆ ಮಾಡಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ಸಹಕಾರದಿಂದ ಜೀರ್ಣೋದ್ಧಾರ ಮಾಡಲಾಗಿದೆ. ಈ ವೇಳೆ ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀಕಂಠಯ್ಯ ಟ್ರಸ್ಟ್ ಗೆ ಸೇರ್ಪಡೆಗೊಂಡು 12 ವರ್ಷ ಅಧ್ಯಕ್ಷರಾಗಿ, ಎರಡು ವರ್ಷ ಉಪಾಧ್ಯಕ್ಷರಾಗಿ ಹಾಗೂ 10 ವರ್ಷ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ದೇಗುಲವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೃಷ್ಣೆಗೌಡ ಹೇಳಿದರು.
ನಂತರ ದೇವಾಲಯದ ಜಮೀನನ್ನು ಸರ್ವೇ ನಡೆಸಿದಾಗ ಈತ ಒಂದು ಸಾವಿರ ಚದರ ಅಡಿ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದರು. ಈ ಬಗ್ಗೆ ಟ್ರಸ್ಟ್ ಪದಾಧಿಕಾರಿಗಳು ಶ್ರೀಕಂಠಯ್ಯ ಅವರನ್ನು ಪ್ರಶ್ನೆ ಮಾಡಿದಾಗ ಅವರು ವಿವಾದವನ್ನು ಹುಟ್ಟು ಹಾಕಿದ್ದಾರೆ ಎಂದು ಗ್ರಾಮದ ಮುಖಂಡರು ಗಂಭೀರ ಆರೋಪ ಮಾಡಿದರು.ಆದರೂ ಸಹ ಟ್ರಸ್ಟ್ ಪದಾಧಿಕಾರಿಗಳು ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದರೂ, ಸಹ ನಮ್ಮ ಮಾತಿಗೆ ಕಿಂಚಿತ್ತೂ ಬೆಲೆ ನೀಡದೆ ಟ್ರಸ್ಟ್ ಪದಾಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಜೊತೆಗೆ ತೋಪಿನ ತಿಮ್ಮಪ್ಪ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರ್ಪಡೆ ಮಾಡುವಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ ಎಂದು ಕಾರ್ಯದರ್ಶಿ ಟಿ.ರವೀಂದ್ರ ದೂರಿದರು. ಶ್ರೀಕಂಠಯ್ಯ ಹೇಳಿಕೆ ಪ್ರಕಾರ ಟ್ರಸ್ಟ್ ನಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ. ಕಾನೂನು ಚೌಕಟ್ಟಿನಲ್ಲಿ ಆಡಿಟ್, ಪರಿಶೀಲನೆ ಮಾಡಿ ಲೆಕ್ಕಪತ್ರಗಳ ನೀಡಲಾಗಿದೆ. ಹೀಗಾಗಿ ದೇಗುಲದ ಟ್ರಸ್ಟ್ ನ ಎಲ್ಲಾ ವ್ಯವಹಾರಗಳು ತೆರೆದ ಪುಸ್ತಕದಂತೆ ಇದೆ. ಪರಿಶೀಲಿಸಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಖಜಾಂಚಿ ದವಲನ ರಾಮಕೃಷ್ಣ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಎ.ಟಿ.ಕರಿಗೌಡ, ಗ್ರಾಪಂ ಸದಸ್ಯೆ ಪವಿತ್ರ, ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಮತ್ತು ಮಹಿಳೆಯರು ಭಕ್ತಾದಿಗಳು ಭಾಗವಹಿಸಿದ್ದರು.