ದಲಿತರ ಹಣ ದುರ್ಬಳಕೆ, ಹಗರಣಗಳಿಗೆ ಖಂಡನೆ

KannadaprabhaNewsNetwork | Published : Aug 13, 2024 12:53 AM

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ನಾವು ದಲಿತರ ಹಾಗೂ ಸಂವಿಧಾನ ಪರ ಎಂದು ಹೇಳಿ, ಇಂದು ಅವರ ಅಭಿವೃದ್ಧಿ ಗಾಗಿ ಇಟ್ಟಂತಹ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕೊಡುವ ವಿದ್ಯಾರ್ಥಿ ವೇತನ ಹಾಗೂ ನಮ್ಮ ಸಮುದಾಯಗಳಿಗೆ ಹೆಚ್ಚಿನ ವ್ಯಾಸಾಂಗಕ್ಕಾಗಿ ನೀಡುತ್ತಿದ್ದ ಅನುದಾನವನ್ನು ನೀಡದೇ ಆ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಕೋಟ್ಯಾಂತರ ರು. ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಈ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು, ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಬಹುಜನ ಸಮಾಜವಾದಿ ಪಾರ್ಟಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ ರಾಜ್ಯ ಬಿಎಸ್ ಪಿ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ಸಂವಿಧಾನದ ಅಡಿ ಸಂವಿಧಾನದ ಸಿದ್ಧಾಂತಗಳನ್ನು ಹಿಡಿದು ಅಧಿಕಾರಕ್ಕೆ ಬಂದ ಈ ಕಾಂಗ್ರೆಸ್ ಸರ್ಕಾರ ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಇಟ್ಟಂತಹ ಎಸ್ಸಿ, ಎಸ್ ಪಿ ಮತ್ತು ಟಿಎಸ್ ಪಿ ಯೋಜನೆಯ ಕೊಟ್ಯಂತರ ರು.ಗಳ ಹಣವನ್ನು ಬಡ ಸಮಾಜಕ್ಕೆ ಬಳಸದೇ ಅದನ್ನು ದುರ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ವಾಲ್ಮೀಕಿ ಇನ್ನಿತರ ಹಗರಣಗಳಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರಲು ಯೊಗ್ಯವಲ್ಲ. ಸಿದ್ದರಾಮಯ್ಯನವರ ಸರ್ಕಾರ ಮೀಸಲಿಟ್ಟ ಹಣವನ್ನು ಲೂಟಿ ಮಾಡುತ್ತಿದೆ. ಇನ್ನು ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ರು. ಹಣವನ್ನು ಇತ್ತೀಚೆಗೆ ನಡೆದಂತಹ ಸಂಸದರ ಚುನಾವಣೆಯಲ್ಲಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ. ದಲಿತರ ಹೆಸರು ಹೇಳಿಕೊಂಡು ಬಂದಂಥ ಈ ಸರ್ಕಾರದಲ್ಲಿರುವ ಸಚಿವರಿಗೆ ಮಾತನಾಡುವ ನೈತಿಕತೆ ಇಲ್ಲವಾಗಿದ್ದು, ಸರ್ಕಾರದ ಎಲ್ಲಾ ಸಚಿವರೂ ಈ ಹಣದಲ್ಲಿ ಪಾಲು ಪಡೆದಿದ್ದಾರೆ. ಇವರಿಗೆ ಸರ್ಕಾರ ನಡೆಸುವ ಯೊಗ್ಯತೆ ಇಲ್ಲ. ಈಗಾಗಲೇ ಮೂಡಾ ಹಗರಣದಿಂದ ಪ್ರಕರಣ ದಾಖಲಾದರೂ ಸಹ ಇವುಗಳನ್ನು ಮರೆಮಾಚಲು ವಿರೋಧ ಪಕ್ಷಗಳ ಮೇಲೆ ಕೆಸರೆರಚುವ ಕೆಲಸ ಮಾಡುತ್ತಿದ್ದಾರೆ.ಇವರಿಗೆ ರಾಜ್ಯದ ಮುಂದೆ ತಲೆಎತ್ತಿ ಅಧಿಕಾರ ಮಾಡಲು ಯೋಗ್ಯತೆ ಇಲ್ಲ. ಕೂಡಲೇ ನೀವು ರಾಜಿನಾಮೆ ನೀಡಬೇಕು. ಈ ಹಗರಣಗಳ ಬಗ್ಗೆ ರಾಜ್ಯಪಾಲರು ಗಮನ ಹರಿಸಿ ರಾಷ್ಟ್ರಪತಿ ಆಳ್ವಿಕೆ ಮಾಡುವ ಮೂಲಕ ಈ ಸರ್ಕಾರವನ್ನು ವಜಾಮಾಡಬೇಕು ಎಂದು ಹೇಳಿದರು.

ಬಿಎಸ್ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನಾವು ದಲಿತರ ಹಾಗೂ ಸಂವಿಧಾನ ಪರ ಎಂದು ಹೇಳಿ, ಇಂದು ಅವರ ಅಭಿವೃದ್ಧಿ ಗಾಗಿ ಇಟ್ಟಂತಹ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕೊಡುವ ವಿದ್ಯಾರ್ಥಿ ವೇತನ ಹಾಗೂ ನಮ್ಮ ಸಮುದಾಯಗಳಿಗೆ ಹೆಚ್ಚಿನ ವ್ಯಾಸಾಂಗಕ್ಕಾಗಿ ನೀಡುತ್ತಿದ್ದ ಅನುದಾನವನ್ನು ನೀಡದೇ ಆ ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಈ ಸರ್ಕಾರದಲ್ಲಿರುವ ಎಲ್ಲಾ ನಮ್ಮ ಸಮುದಾಯದ ಮಂತ್ರಿಗಳು ನೈತಿಕತೆ ಇದ್ದರೆ ರಾಜೀನಾಮೆ ಕೊಡುವಂತೆ ಆಗ್ರಹಿಸಿದರು.

ಬಿಎಸ್ಪಿ ಮುಖಂಡರಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ತಾಲೂಕು ಅಧ್ಯಕ್ಷ ಪ್ರಕಾಶ್, ಲಕ್ಷ್ಮಣ್, ಕೀರ್ತಿ, ಮಲ್ಲಯ್ಯ, ಲೋಹಿತ್, ಸೋಮಶೇಖರ್, ರಾಜು, ಉಮೇಶ್, ನಿಂಗರಾಜು, ಜಯಲಕ್ಷ್ಮೀ, ಮಂಜುನಾಥ್, ಶ್ರೀನಾಥ್, ರಾಜಣ್ಣ ಮತ್ತಿತರರಿದ್ದರು.

Share this article