ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡವ ಪದ್ಧತಿ, ಸಂಸ್ಕೃತಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಆಟ್ ಪಾಟ್‌ಗಳನ್ನು ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ ಹೊಟೇಲ್ ಲಾಡ್ಜ್‌ಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಹಾಗೂ ಖಂಡನೀಯ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಿಡಿ ಕಾರಿದ್ದಾರೆ.
ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಕೂಡ ಒಂದೊಂದು ದೈವಿಕ ಹಿನ್ನಲೆಗಳಿದ್ದು ಇದನ್ನು ಕಂಡ ಕಂಡಲ್ಲಿ ಪ್ರದರ್ಶನ ಮಾಡುವುದು ಕೂಡ ನಿಲ್ಲಬೇಕಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರೆದರೆ ಅಂತಹ ಹೋಂ ಸ್ಟೇ ರೆಸಾರ್ಟ್ ಸೇರಿದಂತೆ ಹೊಟೇಲ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿದ್ದರೆ ಅದಕ್ಕೆ ಆಯಾಯ ಹೋಂ ಸ್ಟೇ ರೆಸಾರ್ಟ್ ಮಾಲಿಕರೇ ನೇರ ಹೊಣೆಗಾರರಾಗುತ್ತಾರೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ ಎಂದಿದ್ದಾರೆ.
ಈಗಾಗಲೇ ಮುಕ್ತವಾಗಿ ಹಲವಾರು ಬಾರಿ ಹಲವಾರು ವಿಷಯಗಳಲ್ಲಿ ಮನವಿ ಮಾಡಿಕೊಂಡಿದ್ದರೂ ಏನೂ ಪ್ರಯೋಜನ ಆಗಿಲ್ಲ. ಕೂಡಲೇ ಈ ರೆಸಾರ್ಟಿನವರು ಕೊಡವ ಜನಾಂಗದ ಕ್ಷಮೆ ಕೇಳಬೇಕು ಹಾಗೂ ನಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ವ್ಯವಹಾರಕ್ಕಾಗಿ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.