ವಕೀಲನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಎಸಿ ವರ್ತನೆಗೆ ಖಂಡನೆ

KannadaprabhaNewsNetwork |  
Published : Mar 13, 2025, 12:46 AM IST
12ಕೆಎಂಎನ್ ಡಿ21 | Kannada Prabha

ಸಾರಾಂಶ

ಮಾ.10 ರಂದು ಕೆ.ಆರ್.ಪೇಟೆ ತಾಲೂಕಿನ ವಕೀಲ ಅಮಿತ್ ಎಂಬುವವರು ಜಮೀನಿನ ವಿಚಾರವಾಗಿ ಉಪವಿಭಾಗಾಧಿಕಾರಿಗಳ ಜತೆ ಚರ್ಚಿಸಲು ಆಗಮಿಸಿದ್ದರು. ಈ ವೇಳೆ ಚರ್ಚೆಗೆ ಅವಕಾಶ ಕೊಡದೆ ಪೊಲೀಸರಿಗೆ ಕರೆ ಮಾಡಿ ವಕೀಲನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಮೀನು ವಿಚಾರವಾಗಿ ಚರ್ಚಿಸುತ್ತಿದ್ದ ವಕೀಲನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರ ವರ್ತನೆ ಖಂಡಿಸಿ ವಕೀಲರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೇರಿದ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕಿನ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಉಪವಿಭಾಗಾಧಿಕಾರಿ ಶ್ರೀನಿವಾಸ್ ನಡೆ ಖಂಡಿಸಿ ಘೋಷಣೆಗಳನ್ನು ಕೂಗಿದರು.

ಮಾ.10 ರಂದು ಕೆ.ಆರ್.ಪೇಟೆ ತಾಲೂಕಿನ ವಕೀಲ ಅಮಿತ್ ಎಂಬುವವರು ಜಮೀನಿನ ವಿಚಾರವಾಗಿ ಉಪವಿಭಾಗಾಧಿಕಾರಿಗಳ ಜತೆ ಚರ್ಚಿಸಲು ಆಗಮಿಸಿದ್ದರು. ಈ ವೇಳೆ ಚರ್ಚೆಗೆ ಅವಕಾಶ ಕೊಡದೆ ಪೊಲೀಸರಿಗೆ ಕರೆ ಮಾಡಿ ವಕೀಲನನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಪಾಂಡವಪುರ ಉಪವಿಭಾಗದ ವ್ಯಾಪ್ತಿಯ ನಾಲ್ಕು ತಾಲೂಕಿನ ವಕೀಲರು ಕೋರ್ಟ್ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.

ಈ ವೇಳೆ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕನಗನಮರಡಿ ನಾಗರಾಜು ಮಾತನಾಡಿ, ಉಪವಿಭಾಗಾಧಿಕಾರಿಗಳು ಪ್ರತಿಯೊಂದು ಕೆಲಸಕ್ಕೂ ಇಂತಿಷ್ಟು ಹಣ ಕೊಡಲೇ ಬೇಕೆಂಬ ನಿಯಮ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಮೂವರು ದಲ್ಲಾಳಿಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು.

ಕಚೇರಿಯಲ್ಲಿ ಮಾಡಬೇಕಾದ ಆದೇಶಗಳನ್ನು ಹೋಟೆಲ್ ಮತ್ತು ದಲ್ಲಾಳಿಗಳ ಮನೆಗಳಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಸಂಜೆ ಮಾಡಿದ ಆದೇಶ ರಾತ್ರಿಯೊಳಗೆ ಬದಲಾಗಿ ದಾಖಲೆಗಳು ಸೃಷ್ಠಿಯಾಗುತ್ತಿವೆ. ವಕೀಲರ ಕರ್ತವ್ಯ ಮತ್ತು ಜ್ಞಾನದ ಬಗ್ಗೆ ಉದಾಸೀನವಾಗಿ ಮಾತನಾಡುತ್ತಾರೆ. ಇದರಿಂದ ವಕೀಲರ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿಗಳ ಕರ್ತವ್ಯ ನಿಷ್ಠೆ ಬಗ್ಗೆ ಅನುಮಾನವಿದೆ. ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೂ ಎಸಿ ನ್ಯಾಯಾಲಯದಲ್ಲಿ ಆಗಿರುವ ಎಲ್ಲಾ ವ್ಯಾಜ್ಯಗಳಿಗೆ ಸಂಬಂಧಿಸಿದ ಆದೇಶಗಳನ್ನು ತನಿಖೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಎಸಿ ನ್ಯಾಯಾಲಯದಲ್ಲಿ ಸಾಕಷ್ಟು ಅಕ್ರಮ ಮತ್ತು ಭ್ರಷ್ಟಚಾರ ನಡೆಯುತ್ತಿದೆ. ಈ ಬಗ್ಗೆ ನಮ್ಮ ಬಳಿ ಸೂಕ್ತ ದಾಖಲೆಗಳಿದೆ. ಭ್ರಷ್ಟಚಾರದಲ್ಲಿ ಮುಳುಗಿರುವ ಉಪವಿಭಾಗಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸದಿದ್ದರೆ ಎಸಿ ನ್ಯಾಯಾಲಯದಲ್ಲಿ ನಡೆಯುವ ಯಾವುದೇ ಕಲಾಪಗಳಲ್ಲಿ ವಕೀಲರು ಭಾಗವಹಿಸುವುದಿಲ್ಲ. ಅವರು ಏಕ ಪಕ್ಷೀಯವಾಗಿ ಆದೇಶ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

ಇದೇ ವೇಳೆ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿರುವ ಉಪವಿಭಾಗಾಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವನಂದಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಕಾಳೇಗೌಡ, ಕಾರ್ಯದರ್ಶಿ ನಾಗರಾಜು, ವಕೀಲರಾದ ಜಿ.ಬಿ.ಸುರೇಶ್, ಪುಟ್ಟರಾಜು, ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!