ಕನ್ನಡಪ್ರಭ ವಾರ್ತೆ ಮಡಿಕೇರಿ
ಹಲ್ಲೆ ಪ್ರಕರಣ ಖಂಡನೀಯವೆಂದು ಮೂರ್ನಾಡು ಆಪ್ತಮಿತ್ರ ಬಳಗದ ಅಧ್ಯಕ್ಷರು ಮತ್ತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಲ್ಲರೊಂದಿಗೆ ಸಾಮರಸ್ಯದಿಂದ ಜೀವನ ಸಾಗಿಸುತ್ತಿರುವ ಅರ್ಚಕರ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವುದು ವಿಷಾದಕರ. ಇನ್ನು ಮುಂದೆ ಈ ರೀತಿಯ ಘಟನೆಗಳು ಮತ್ತೆ ಜಿಲ್ಲೆಯಲ್ಲಿ ಸಂಭವಿಸಬಾರದು. ಹಲ್ಲೆ ಮಾಡಿದವರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅರ್ಚಕ ವರ್ಗಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.ಯುವಕ ಮಂಡಳಿ ಆಗ್ರಹ:
ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ಹಲ್ಲೆ ಮಾಡಿದವರನ್ನು ತಕ್ಷಣ ಪೊಲೀಸರು ಬಂಧಿಸಬೇಕೆಂದು ಮೂರ್ನಾಡು ಅಯ್ಯಪ್ಪ ಯುವಕ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಆಗ್ರಹಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಘ್ನೇಶ್ ಭಟ್ ಹಾಗೂ ಅವರ ತಾಯಿಯ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿರುವುದು ಖಂಡನೀಯ. ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಇನ್ನು ಮುಂದೆ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆಯನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಯುವಕ ಸಂಘ ಖಂಡನೆ:ಮೂರ್ನಾಡಿನ ನಿವಾಸಿಯಾಗಿರುವ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಹಾಗೂ ಅವರ ತಾಯಿಯ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಖಂಡನೀಯವೆಂದು ಮೂರ್ನಾಡು ಗಜಾನನ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇವರ ಸೇವೆಯಲ್ಲಿ ತೊಡಗಿರುವ ಅರ್ಚಕ ವಿಘ್ನೇಶ್ ಭಟ್ ಅವರ ಮೇಲೆ ನಡೆದಿರುವ ಹಲ್ಲೆ ಅಮಾನುಷವಾಗಿದೆ. ಪೊಲೀಸ್ ಇಲಾಖೆ ಸೂಕ್ತ ಭದ್ರತೆಯನ್ನು ನೀಡಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಿದ್ದರೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ಇನ್ನು ಮುಂದೆ ಈ ರೀತಿಯ ಹೀನ ಕೃತ್ಯಗಳು ನಡೆಯದಂತೆ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.