ಅರ್ಹರಿಗೆ ಸಕಾಲದಲ್ಲಿ ಸೇವೆ ಒದಗಿಸಿ: ಜಗದೀಶ ಶೆಟ್ಟರ್‌

KannadaprabhaNewsNetwork |  
Published : Jan 31, 2025, 12:48 AM IST
ಸಂಸದ ಜಗದೀಶ ಶೆಟ್ಟರ್‌ ಅವರು ಜಿಲ್ಲಾ ಮಟ್ಟದ ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು | Kannada Prabha

ಸಾರಾಂಶ

ಸರ್ಕಾರದ ವಿವಿಧ ಯೋಜನೆಗಳಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಸಕಾಲದಲ್ಲಿ ಸೇವೆಗಳು ದೊರೆಯಬೇಕು. ಅರ್ಹ ಫಲಾನುಭವಿಗಳು ವಿವಿಧ ಯೋಜನೆಗಳ ಮೂಲಕ ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಕನಿಷ್ಟಪಕ್ಷ ಅರ್ಜಿಯೊಂದಿಗೆ ಅವಶ್ಯಕವಾಗಿ ಬೇಕಾದ ದಾಖಲೆಗಳ ಕುರಿತು ಸೂಕ್ತ ಮಾಹಿತಿ ಒದಗಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸರ್ಕಾರದ ವಿವಿಧ ಯೋಜನೆಗಳಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ಸಕಾಲದಲ್ಲಿ ಸೇವೆಗಳು ದೊರೆಯಬೇಕು. ಅರ್ಹ ಫಲಾನುಭವಿಗಳು ವಿವಿಧ ಯೋಜನೆಗಳ ಮೂಲಕ ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಕನಿಷ್ಟಪಕ್ಷ ಅರ್ಜಿಯೊಂದಿಗೆ ಅವಶ್ಯಕವಾಗಿ ಬೇಕಾದ ದಾಖಲೆಗಳ ಕುರಿತು ಸೂಕ್ತ ಮಾಹಿತಿ ಒದಗಿಸಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಮಿತಿ/ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾಂಕ್ ಗಳು ವಿನಾಕಾರಣ ಅರ್ಜಿ ತಿರಸ್ಕರಿಸಬಾರದು. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕಾದರೆ ಬ್ಯಾಂಕ್ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಬೇರೆ ಬೇರೆ ರೀತಿಯ ತರಬೇತಿಗಳನ್ನು ಸರ್ಕಾರದಿಂದ ನೀಡಲಾಗುತ್ತಿದ್ದು, ಬಡತನ ರೇಖೆಗಿಂತ ಕೆಳಗಿರುವವರು ಆರ್ಥಿಕವಾಗಿ ಸಬಲೀಕರಣ ಹೊಂದಬೇಕೆನ್ನುವುದೇ ಇದರ ಉದ್ದೇಶವಾಗಿದೆ. ತರಬೇತಿದಾರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ನೀಡುವಲ್ಲಿ ವಿನಾಕಾರಣ ವಿಳಂಬ ಮಾಡಬಾರದು ಎಂದು ಹೇಳಿದರು.

ಸಾರ್ವಜನಿಕರಲ್ಲಿ ಬ್ಯಾಂಕ್‌ಗಳ ಬಗ್ಗೆ ವಿಶ್ವಾಸ ಮೂಡುವಂತೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ಬ್ಯಾಂಕಿಗೆ ಹೋಗಲು ಹಿಂಜರಿಯುವ ಸ್ಥಿತಿ ಇದೆ. ಬ್ಯಾಂಕ್ ಶಾಖೆಗಳಲ್ಲಿ ಸೌಹಾರ್ದಯುತ ವಾತಾವರಣ ಇರದಿದ್ದರೆ ಜನರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ ಎಂದರು.

ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಈಗಾಗಲೇ ಪ್ರಸಕ್ತ ಸಾಲಿನ ಸಾಲ ಸೌಲಭ್ಯಗಳ ಅರ್ಜಿಗಳನ್ನು ಸಂಬಂಧಿಸಿದ ಬ್ಯಾಂಕುಗಳಿಗೆ ಸಲ್ಲಿಸಲಾಗಿದೆ. ಸಾಲ ವಿತರಣೆಗೆ ನಿರಾಕರಿಸಿದ ಬ್ಯಾಂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಅರ್ಜಿಗಳ ವಿಲೇವಾರಿಗೆ ತಿಳಿಸಲಾಗುತ್ತಿದೆ ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದರು.

ಪಿಎಂ ಸ್ವನಿಧಿ ಯೋಜನೆಯಡಿ ಯಾವುದೇ ಅರ್ಜಿಗಳು ಬ್ಯಾಂಕ್ ಗಳಲ್ಲಿ ಬಾಕಿ ಇಲ್ಲ. ಬ್ಯಾಂಕ್ ಗಳಿಂದ ಯಾವುದೇ ಅಡೆತಡೆ ಇಲ್ಲದೆ ಸಕಾಲದಲ್ಲಿ ಅರ್ಜಿಗಳು ವಿಲೇವಾರಿಯಾಗುತ್ತಿವೆ ಎಂದು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವ್ಯವಸ್ಥಾಪಕ ಡಾ.ಸಂಜೀವ ತಿಗಣಿ ವಿವರಿಸಿದರು.

ಎಲ್.ಡಿ ಎಂ ಪ್ರಶಾಂತ ಘೋಡಕೆ, ನಬಾರ್ಡ್ ಡಿಡಿಎಂ ಅಭಿನವ ಯಾದವ, ಆರ್. ಬಿ.ಐ ಅಧಿಕಾರಿ ಇಲಾ ಸಾಹು, ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಅಡವಿಮಠ, ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ಎ.ಎಲ್.ಡಿ.ಒ ಮಿಥುನ್ ಬಾಬಾಶೆಟ್ ಸೇರಿದಂತೆ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು. ಕನ್ನಡದಲ್ಲಿ ವ್ಯವಹಾರ ಕಡ್ಡಾಯ: ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬ್ಯಾಂಕ್‌ಗಳಲ್ಲಿ ಕನ್ನಡದ ಫಲಕ ಹಾಕಿದರೆ ಸಾಲದು. ಎಲ್ಲಾ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಬಳಸಬೇಕು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!