ಶಿವಮೊಗ್ಗ: ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಹತ್ತಿಕ್ಕುವ ಕೆಲಸ ಮಾಡಿ ಗೋರಕ್ಷಕರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡು ಅಕ್ರಮವಾಗಿ ಗೋಸಾಗಣೆ ಮಾಡುತ್ತಿದ್ದ ವ್ಯಕ್ತಿಗಳನ್ನು ಮತ್ತು ವಾಹನವನ್ನು ಜಪ್ತಿಮಾಡದೆ ಹಿಂದೂಗಳ ಭಾವನೆಗೆ ಧಕ್ಕೆತಂದು, ಕಾನೂನನ್ನು ಪಾಲಿಸದೆ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಅಕ್ರಮ ಗೋಸಾಗಾಣಿಕೆ ಕಾನೂನುಬಾಹಿರವಾಗಿದ್ದರೂ, ಜೂನ್ ೬ರಂದು ಬೆಳಗಿನ ಜಾವ 1.28 ಕ್ಕೆ ನಗರದ ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ಗೋಸಾಗಾಣಿಕೆ ಆಗುತ್ತಿದ್ದ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ವಿಎಚ್‌ಪಿ ಕಾರ್ಯಕರ್ತನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ಯಾವುದೇ ದಾಖಲೆ ಇಲ್ಲದಿದ್ದರೂ ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿದ್ದ ಕೆ.ಎ.48 7597 ಅಶೋಕ್ ಲೈಲ್ಯಾಂಡ್ ವಾಹನವನ್ನು ಜಪ್ತಿಮಾಡದೆ ಆರೋಪಿಗಳನ್ನು ಬಂಧಿಸದೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಪೊಲೀಸ್ ಠಾಣೆಯಿಂದ ಬಿಟ್ಟುಕಳುಹಿಸಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ಕೂಡಲೇ ರಾಜ್ಯಪಾಲರು ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಶ್ರಮಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆ ವೇಳೆ ವಿಎಚ್‌ಪಿ ಜಿಲ್ಲಾಧ್ಯಕ್ಷ ವಾಸುದೇವ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಪ್ರಮುಖರಾದ ರಮೇಶ್‌ಬಾಬು ಜಾದವ್, ಸುರೇಶ್‌ಬಾಬು, ದೀನದಯಾಳ್, ರಾಜು, ವಡಿವೇಲು, ಅಂಕುಶ್, ರಾಜೇಶ್ ಗೌಡ ಮತ್ತಿತರರಿದ್ದರು.