ಕರವೇ ನಾರಾಯಣಗೌಡರ ಬಂಧನಕ್ಕೆ ಖಂಡನೆ

KannadaprabhaNewsNetwork |  
Published : Dec 29, 2023, 01:30 AM ISTUpdated : Dec 29, 2023, 01:31 AM IST
28ಎಚ್ಎಸ್ಎನ್22 : ಹಾಸನ ನಗರದ ಬೂವನಹಳ್ಳಿ ಬೈಪಾಸಿನಲ್ಲಿ ರಸ್ತೆತಡೆ ನಡೆಸಿದ ಕರವೇ ಕಾರ್ಯಕರ್ತರು. | Kannada Prabha

ಸಾರಾಂಶ

ಜಿಲ್ಲಾಧ್ಯಕ್ಷ ಸಿ.ಡಿ ಮನುಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ನಗರದ ಭುವನಹಳ್ಳಿ-ಬೆಂಗಳೂರು ರಸ್ತೆ ಬೈ ಪಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 75ನ್ನು ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರಿಂದ ಹೆದ್ದಾರಿ ತಡೆದು ಪ್ರತಿಭಟನೆ , ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಮನುಕುಮಾರ್

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಏನ್. ನಾರಾಯಣ ಗೌಡರ ಬಂಧನವನ್ನು ಖಂಡಿಸಿ ಗುರುವಾರ ಕರವೇ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ರಸ್ತೆತಡೆದು ಪ್ರತಿಭಟನೆ ನಡೆಸಿದರು.

ಜಿಲ್ಲಾಧ್ಯಕ್ಷ ಸಿ.ಡಿ ಮನುಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ನಗರದ ಭುವನಹಳ್ಳಿ-ಬೆಂಗಳೂರು ರಸ್ತೆ ಬೈ ಪಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 75ನ್ನು ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಹಿನ್ನೆಲೆ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು, ನಂತರ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಇದೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಿ.ಡಿ. ಮನುಕುಮಾರ್ ಅವರು, ಬೆಂಗಳೂರಿನಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡ ನೇತೃತ್ವದಲ್ಲಿ ನಡೆದ ‘ಕನ್ನಡ ಅಭಿಯಾನ ಜಾಥಾ’ ದಲ್ಲಿ ಅನ್ಯ ಭಾಷೆಯ ನಾಮಫಲಕವನ್ನು ತೆಗೆಸಿ ಕನ್ನಡ ಭಾಷೆಯ ನಾಮಫಲಕ ಹಾಕಬೇಕೆಂಬ ಉದ್ದೇಶದಲ್ಲಿ ಹೊರಟಾಗ ರಾಜ್ಯಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಬಂಧಿಸಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯ ಕೂಡ ರಾಜ್ಯ ಸರಕಾರಕ್ಕೆ ಇಲ್ಲ. ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದ್ದು, ಇಂತಹ ಸಂದರ್ಭದಲ್ಲಿ ಕನ್ನಡ ಅಭಿಯಾನ ಶುರುಮಾಡುವ ವೇಳೆ ಕರವೇ ರಾಜ್ಯಾಧ್ಯಕ್ಷರನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ನಮ್ಮ ಕನ್ನಡ ಭಾಷಿಕರೇ ಅಲ್ಪಸಂಖ್ಯಾತರಾಗುವ ಪರಿಸ್ಥಿತಿ ಬಂದಿದೆ. ಬೇರೆ ರಾಜ್ಯದಿಂದ ವಲಸೆ ಬಂದಿರುವ ಇತರೆ ಭಾಷಿಕರಿಂದ ಕನ್ನಡಿಗರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಇದೆ ರೀತಿ ಮುಂದುವರೆದರೆ ಕರ್ನಾಟಕವೇ ನಮ್ಮದು ಎಂದು ಕೇಂದ್ರಾಡಳಿತ ಪ್ರದೇಶ ಮಾಡಲು ಹೇಳಿಕೆ ಕೊಡಲು ಹಿಂಜರಿಯುವುದಿಲ್ಲ. ಇಂತಹ ವೇಳೆ ನಾವು ಹೋರಾಟ ಕೈಗೆತ್ತಿಕೊಂಡಾಗ ಬಂದಿಸಿರುವುದು ಖಂಡನೀಯ. ಇದೆ ರೀತಿ ನಡೆದರೆ ಮುಂದಿನ ದಿನಗಳಲ್ಲಿ ಕರವೇಯಿಂದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಸೀತಾರಾಮು, ಬೋರೇಗೌಡ, ಅಭಿಗೌಡ, ಯುವ ಘಟಕದ ಅಧ್ಯಕ್ಷ ಪ್ರೀತಮ್ ರಾಜ್, ಬೇಲೂರು ತಾಲೂಕು ಅಧ್ಯಕ್ಷ ಚಂದ್ರಶೇಖರ್, ಆಲೂರು ತಾಲೂಕು ಅಧ್ಯಕ್ಷ ನಟರಾಜ್, ತನುಗೌಡ ಮತ್ತಿತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ