ಕನ್ನಡಪ್ರಭ ವಾರ್ತೆ ಮದ್ದೂರು
ಗೊರವನಹಳ್ಳಿಯ ಅರಳಿಕಟ್ಟೆ ಬಳಿ ಪಕ್ಷಾತೀತವಾಗಿ ಭಾಗವಹಿಸಿದ್ದ ಗ್ರಾಮದ ಮುಖಂಡರು ಭಾನುವಾರ ರಾತ್ರಿ ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ದೌರ್ಜನ್ಯ ನಡೆಸಿರುವುದನ್ನು ತೀವ್ರವಾಗಿ ಖಂಡಿಸಿದರು.
ಮದ್ದೂರು ನಗರಸಭೆ ವ್ಯಾಪ್ತಿಗೆ ಗೊರವನಹಳ್ಳಿ ಸೇರ್ಪಡೆ ಮಾಡಿರುವ ವಿವಾದ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಈ ಸಂದರ್ಭದಲ್ಲಿ ಪೊಲೀಸರು ಶಾಸಕರ ಗುಲಾಮರಂತೆ ವರ್ತಿಸಿ ಏಕಾಯಿಕಿ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.ಪೊಲೀಸರ ಕ್ರಮ ಖಂಡಿಸಿ ಮದ್ದೂರು ಪ್ರವಾಸಿ ಮಂದಿರದ ಬೆಂಗಳೂರು - ಮೈಸೂರು ಹಾಗೂ ಮಳವಳ್ಳಿ ರಸ್ತೆಯಲ್ಲಿ ನೂರಾರು ಮಂದಿ ಗ್ರಾಮಸ್ಥರು ಕೆಲಕಾಲ ರಸ್ತೆ ತಡೆ ಚಳವಳಿ ನಡೆಸಿದ ನಂತರ ತಹಸೀಲ್ದಾರ್ ಮತ್ತು ತಾಪಂ ಇಓ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ನಮ್ಮ ಈ ಎಲ್ಲಾ ತೀರ್ಮಾನಕ್ಕೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ನಂತರ ಮತ್ತೊಮ್ಮೆ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
ಸಭೆಯಲ್ಲಿ ನಿವೃತ್ತ ಉಪನ್ಯಾಶಕಿ ಶ್ರೀಲತಾ, ಮುಖಂಡರಾದ ಗೊರವನಹಳ್ಳಿ ಪ್ರಸನ್ನ, ಉಮೇಶ, ಜಿ.ಸಿ .ಶಿವಪ್ಪ, ರವಿ, ಶಿವ ಬೋರಯ್ಯ ಮತ್ತಿತರರಿದ್ದರು.ಪೊಲೀಸ್ ಪೇದೆಗಳ ಕರ್ತವ್ಯಕ್ಕೆ ಅಡ್ಡಿ ಮಹಿಳೆಯರ ವಿರುದ್ಧ ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಗೊರವನಹಳ್ಳಿಯಲ್ಲಿ ಶನಿವಾರ ಸಂಜೆ ಗ್ರಾಮ ಪಂಚಾಯ್ತಿ ದಾಖಲಾತಿಗಳನ್ನು ಸಾಗಿಸುತ್ತಿದ್ದ ವೇಳೆ ಗಲಾಟೆ ಮಾಡಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗ್ರಾಮದ ಹಲವು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮದ್ದೂರು ಪೊಲೀಸ್ ಠಾಣೆ ಮಹಿಳಾ ಪೇದೆ ಆರ್.ಸುಮಾ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಮಹಿಳೆಯರ ವಿರುದ್ಧ ಬಿಎಸ್ಎನ್ ಕಾಯ್ದೆ 132ರ ಅನ್ವಯ 115ರ ಅಡಿಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.ಮದ್ದೂರು ನಗರಸಭೆ ವ್ಯಾಪ್ತಿಗೆ ಗೊರವನಹಳ್ಳಿ ಗ್ರಾಮವನ್ನು ಸೇರ್ಪಡೆ ವಿವಾದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗ ಅಧಿಕಾರಿಗಳು ಗ್ರಾಮ ಪಂಚಾಯ್ತಿಗೆ ಸೇರಿದ ಕಡತಗಳನ್ನು ಸಾಗಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಚಳವಳಿ ನಿರತ ಗ್ರಾಮದ ಮಹಿಳೆಯರು ಕಡತ ಸಾಗಿಸದಂತೆ ಅಧಿಕಾರಿಗಳಿಗೆ ತಡೆ ವೊಡ್ಡಲು ಮುಂದಾದರು.
ಈ ವೇಳೆ ಗ್ರಾಮಸ್ಥರು ಮತ್ತು ಮಹಿಳಾ ಪೇದೆ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ನಡೆಯಿತು. ಆನಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಸ್ಥಳದಲ್ಲಿ ನಡೆದ ಘಟನೆಯ ವಿಡಿಯೋ ಚಿತ್ರೀಕರಣದ ಆಧಾರದ ಮೇಲೆ ಪೊಲೀಸರು ದಾಖಲು ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.