ಸಂಸದರ ಅಮಾನತಿಗೆ ಖಂಡನೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork | Updated : Dec 23 2023, 01:46 AM IST

ಸಾರಾಂಶ

ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಅಮಿತ್ ಷಾ, ಪ್ರಧಾನಿ ಮೋದಿ, ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಂದ್ರ ಸರ್ಕಾರದ ಏಕಪಕ್ಷೀಯ ನೀತಿ ಹಾಗೂ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಅಧಿವೇಶನದ ಸಮಯದಲ್ಲಿ ಅಮಾನತು ಮಾಡಿದ್ದನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಅಮಿತ್ ಷಾ, ಪ್ರಧಾನಿ ಮೋದಿ, ಸಂಸದ ಪ್ರತಾಪ್ ಸಿಂಹ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತಪ್ಪ ಮಾತನಾಡಿ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸಂಸತ್ ಭವನದ ಒಳಗೆ ನುಗ್ಗಿದ ಅಪರಿಚಿತ ಯುವಕರ ಕೃತ್ಯದಿಂದ ಆಗಿರುವ ಭದ್ರತಾ ಲೋಪ ಬಗ್ಗೆ ಚರ್ಚಿಸಬೇಕೆನ್ನುವ ವಿಪಕ್ಷಗಳ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಲೋಕಸಭಾ ಸದಸ್ಯರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವವಕ್ಕೆ ಅವಮಾನ ಮಾಡಿರುವುದು ಖಂಡನೀಯ ಎಂದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೆಲ್ಲ ಭದ್ರತಾ ಲೋಪವಾಗಿದೆ. 22 ವರ್ಷಗಳ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸಂಸತ್ ಮೇಲೆ ದಾಳಿಯಾಗಿತ್ತು. ಇದೀಗ ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದ ವ್ಯಕ್ತಿಗಳು ಸಂಸತ್‌ನಲ್ಲಿ ಆತಂಕ ಸೃಷ್ಟಿಸಿದ್ದು, ಈ ಘಟನೆಯಿಂದ ದೇಶದ ಗೌರವಕ್ಕೆ ಧಕ್ಕೆ ಉಟಾಗಿದ್ದು, ಘಟನೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿದ ಉತ್ತಪ್ಪ, ಸಂಸದ ಪ್ರತಾಪ್ ಸಿಂಹ ತಕ್ಷಣ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಮಾಧ್ಯಮ ವಕ್ತಾರ ಟಿ.ಪಿ.ರಮೇಶ್, ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್, ನಗರಾಧ್ಯಕ್ಷ ಬಿ.ವೈ. ರಾಜೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Share this article