ಧಾರವಾಡ: ಕಾಶ್ಮೀರದ ಅನಂತನಾಗ ಜಿಲ್ಲೆಯ ಪಹಲ್ಗಾಮ್ ಪ್ರದೇಶದಲ್ಲಿ ನಡೆದಿರುವ ಉಗ್ರರ ದಾಳಿ ಖಂಡಿಸಿದ್ದಲ್ಲದೇ, ಈ ದುರ್ಘಟನೆಯಲ್ಲಿ ಹತರಾದ ಪ್ರವಾಸಿಗರಿಗೆ ಇಲ್ಲಿಯ ಕಾರ್ಗಿಲ್ ವಿಜಯ ಸ್ಮಾರಕ ಸಮಿತಿಯಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಉಗ್ರರ ದಾಳಿ ಮತಾಂಧ ಭಯೋತ್ಪಾದಕರ ಕ್ರೌರ್ಯದ ಮತ್ತೊಂದು ಮಗ್ಗಲ್ಲನ್ನು ಜಗತ್ತಿಗೆ ಪರಿಚಯಿಸಿದೆ. ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಮೂಲಕ ಭಾರತವನ್ನು ಸದಾ ಕಾಡುವ ಪಾಕಿಸ್ತಾನ ಪ್ರೇರಿತ ಉಗ್ರರ ಎಲ್ಲಾ ಸಂಘಟನೆಗಳನ್ನು ನಿರ್ನಾಮ ಮಾಡುವುದು ಇಂದಿನ ಆದ್ಯತೆ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತ ಉದಯ ಯಂಡಿಗೇರಿ ಹೇಳಿದರು.
ಭಾರತದ ಹಿತದೃಷ್ಟಿಯಿಂದ ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಭಾರತೀಯರೆಲ್ಲರೂ ಕೈ ಜೋಡಿಸಬೇಕು ಎಂದು ಕಾರ್ಗಿಲ ವಿಜಯ ಸ್ಮಾರಕ ಸಮಿತಿಯ ಕಾರ್ಯದರ್ಶಿ ಆನಂದ ಕುಲಕರ್ಣಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಬಿ.ಎಸ್. ತಾಳಿಕೋಟಿ, ಸಂಜಯ ಪಾಟೀಲ, ಮಹಾಂತೇಶ ಲಿಂಬೆಣ್ಣದೇವರಮಠ, ಸತೀಶ ತೋರಗಲ್, ಉಳವಪಾ ತಿರಲಾಪೂರ, ಮಾಜಿ ಸೈನಿಕ ಭೀಮಪ್ಪ ಜಾಧವ್ ಇದ್ದರು.