ಹುಬ್ಬಳ್ಳಿ: ಉಗ್ರರ ದಾಳಿಯಿಂದ ತೊಂದರೆಗೊಳಗಾದ ಕನ್ನಡಿಗರ ರಕ್ಷಣೆ, ನೆರವಿಗೆ ಕಾಶ್ಮೀರಕ್ಕೆ ರಾಜ್ಯದ ಪ್ರತಿನಿಧಿಯಾಗಿ ತೆರಳಿರುವ ಕಾರ್ಮಿಕ ಸಂತೋಷ ಲಾಡ್, ಮನೆಯ ಮಗನಂತೆ ಕನ್ನಡಿಗರಿಗೆ ನೆರವು ನೀಡುತ್ತಿದ್ದಾರೆ. ಮತ್ತೆ ಆಪತ್ಬಾಂಧವರಂತೆ ಧಾವಿಸಿ ಕನ್ನಡಿಗರ ರಕ್ಷಣೆಯಲ್ಲಿ ತೊಡಗಿದ್ದಾರೆ.
ಮಂಗಳವಾರ ತಡರಾತ್ರಿ 3 ಗಂಟೆಗೆ ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ತೆರಳಿ 6 ಗಂಟೆಗೆ ಶ್ರೀನಗರ ತಲುಪಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಪಹಲ್ಗಾಮ್‌ಗೆ ತೆರಳಿದ್ದಾರೆ.ದಾಳಿಯಲ್ಲಿ ಮೃತರಾದ ಪ್ರವಾಸಿಗರ ಮೃತದೇಹ ಇಟ್ಟಿದ್ದ ಶವಾಗಾರಕ್ಕೆ ತೆರಳಿ ಕನ್ನಡಿಗರ ಗುರುತು ಪತ್ತೆ ಹಚ್ಚಿ ಅಂತಿಮ ನಮನ ಸಲ್ಲಿಸಿದ್ದಾರೆ. ಅವರ ಕುಟುಂಬಸ್ಥರನ್ನು ಕಂಡು ಅವರಿಗೆಲ್ಲ ಸಾಂತ್ವನ ಹೇಳಿದ್ದಾರೆ.
ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಳಿಕ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ ಕನ್ನಡಿಗರು ಎಷ್ಟು ಜನರು ಎಂಬುದನ್ನು ಪತ್ತೆ ಹಚ್ಚುವ ಕೆಲಸ ಶುರು ಮಾಡಿದ್ದಾರೆ.ಶ್ರೀನಗರ, ಪಹಲ್ಗಾಮ್ ಸೇರಿದಂತೆ ವಿವಿಧೆಡೆ ಹೋಟೆಲ್‌ಗಳಲ್ಲಿ ಸರಿಸುಮಾರು 150-200ಕ್ಕೂ ಅಧಿಕ ಕನ್ನಡಿಗರು ನೆಲೆಸಿದ್ದರು. ಎಲ್ಲರೂ ಪ್ರವಾಸಕ್ಕೆಂದು ತೆರಳಿದವರೇ. ಯಾರ್‍ಯಾರು ಎಲ್ಲೆಲ್ಲಿ ಬೀಡು ಬಿಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಅವರಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಯಾರೂ ಆತಂಕ ಪಡಬೇಡಿ. ನಿಮ್ಮೊಂದಿಗೆ ರಾಜ್ಯ ಸರ್ಕಾರ ಇದೆ. ಎಲ್ಲರನ್ನು ಇಲ್ಲಿಂದ ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ಅಭಯ ಹಸ್ತ ನೀಡಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿ, ವಿವಿಧ ಹೋಟೆಲ್‌ಗಳಲ್ಲಿ ಕನ್ನಡಿಗರು ವಾಸವಾಗಿದ್ದಾರೆ. ಅವರಲ್ಲಿ ಕೆಲವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದೇನೆ. ಇನ್ನುಳಿದವರನ್ನು ಹುಡುಕಿ ಭೇಟಿ ಮಾಡುತ್ತೇನೆ. ಕನ್ನಡಿಗ ಪ್ರವಾಸಿಗರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕಳುಹಿಸಿಕೊಡಲಾಗುವುದು. ಈ ಬಗ್ಗೆ ಯಾವ ಪ್ರವಾಸಿಗರು ಆತಂಕ ಪಡಬಾರದು ಎಂದು ಹೇಳಿದ್ದಾರೆ. ಜತೆಗೆ ಕಾಶ್ಮೀರದಲ್ಲಿರುವ ಕನ್ನಡಿಗರು ತಮ್ಮನ್ನು 9845739999 ಈ ನಂಬರ್‌ಗೆ ಸಂಪರ್ಕಿಸಬೇಕೆಂದು ಕೇಳಿಕೊಂಡಿದ್ದಾರೆ.ಆಪತ್ಬಾಂಧವ: ಹಿಂದೆ ಉತ್ತರಾಖಂಡದಲ್ಲಿ ಉಂಟಾಗಿದ್ದ ಅತಿವೃಷ್ಟಿ, ಗುಡ್ಡ ಕುಸಿತ, ಓಡಿಸಾದಲ್ಲಿ ರೈಲು ಅಪಘಾತ ಸೇರಿದಂತೆ ಬೇರೆ ಬೇರೆ ಅವಧಿಯಲ್ಲಿ ಯಾವುದೇ ರಾಜ್ಯದಲ್ಲಿ ಅವಘಡಗಳು ಸಂಭವಿಸಿದರೂ ಕನ್ನಡಿಗರ ರಕ್ಷಣೆಗೆ ತೆರಳುವುದು ಲಾಡ್. ಯಾವುದೇ ರಾಜ್ಯದಲ್ಲಿ ಅತಿವೃಷ್ಟಿ, ಹಿಮಪಾತ, ರೈಲ್ವೆ ಅಪಘಾತ ಇದೀಗ ಉಗ್ರ ದಾಳಿ ಹೀಗೆ ಏನೇ ಅವಘಡ ಸಂಭವಿಸಿದರೂ ಕಾಂಗ್ರೆಸ್ ಸರ್ಕಾರದ ವತಿಯಿಂದ ಅಲ್ಲಿಗೆ ತೆರಳಿ ತೊಂದರೆಗೊಳಗಾದವರ ಮನೆ ಮಗನಂತೆ ಸೇವೆ ಸಲ್ಲಿಸಿ ಅವರನ್ನೆಲ್ಲ ಸುರಕ್ಷಿತವಾಗಿ ಕರೆದುಕೊಂಡು ಬರುವ ಲಾಡ್ ಅಕ್ಷರಶಃ ಅಪತ್ಬಾಂಧವರಂತೆ ಆಗಿದ್ದಾರೆ. ಇದೀಗ ಉಗ್ರ ದಾಳಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮಾಡುತ್ತಿರುವುದಕ್ಕೆ ಅಲ್ಲಿನವರು ಧನ್ಯವಾದ ತಿಳಿಸುತ್ತಿದ್ದಾರೆ.