ಹುಬ್ಬಳ್ಳಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಪಿವಿಪಿ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಬಿವಿಬಿ ಕಾಲೇಜಿನ ಎದುರು ಫಹಲ್ಗಾಮ್‌ನಲ್ಲಿ ಇಸ್ಲಾಂ ಉಗ್ರರ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ವಿದ್ಯಾರ್ಥಿಗಳು ಇಸ್ಲಾಂ ಉಗ್ರರ ಕೃತ್ಯ ಮತ್ತು ಹಿಂದೂ ನರಮೇಧವನ್ನು ಖಂಡಿಸಿದ ಭಿತ್ತಿಪತ್ರ ಪ್ರದರ್ಶಿಸಿದರು. ಬಿವಿಬಿ ವೃತ್ತದಲ್ಲಿ ಟಯರ್‌ಗೆ ಬೆಂಕಿ ಹಚ್ಚಿದರಲ್ಲದೇ, ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಟಯರ್‌ಗೆ ಬೆಂಕಿ ಹಚ್ಚಿದ ವಿಚಾರಕ್ಕೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ವಾಗ್ವಾದವೂ ಉಂಟಾಯಿತು. ಬಳಿಕ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಎಬಿವಿಪಿ ಹುಬ್ಬಳ್ಳಿ ನಗರ ಕಾರ್ಯದರ್ಶಿ ಸಿದ್ದಾರ್ಥ ಕೋರಿ ಮಾತನಾಡಿ, ಪ್ರವಾಸಿಗರ ಮೇಲೆ ನಡೆಸಿದ ಗುಂಡಿನ ದಾಳಿ ಹೇಡಿತನದ ಕೃತ್ಯ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದು ಸಾರ್ವಕಾಲಿಕವಾಗಿದ್ದು, ಅಲ್ಲಿನ ಪ್ರತ್ಯೇಕವಾದದ ಮನಸ್ಥಿತಿ ಬದಲಾಯಿಸಲು ಹಾಗೂ ಜನ-ಜೀವನ ಸ್ಥಿತಿಗತಿಯನ್ನು ಸ್ಥಿರಗೊಳಿಸಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕ್ರಮವಹಿಸಿದೆ. ಈ ಮಧ್ಯೆಯೂ ಭಯೋತ್ಪಾದಕ ನುಸುಳಕೋರರ ಹಾಳಿ ತಡೆಗಟ್ಟಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಉಗ್ರರ ವಿರುದ್ಧ ವ್ಯಾಪಕ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡು ತಕ್ಕ ಉತ್ತರ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೂ ಪೂರ್ವದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಹತ್ಯೆಗೊಳಗಾದವವರಿಗೆ ಎಬಿವಿಪಿ ಕಾರ್ಯಕರ್ತರು ಸಂತಾಪ ಸೂಚಿಸಿದರಲ್ಲದೇ, ಗಾಯಾಳುಗಳು ಶೀಘ್ರವೇ ಚೇತರಿಕೆ ಕಾಣಲಿ ಎಂದು ಪ್ರಾರ್ಥಿಸಿದರು. ನಂತರ ವಿದ್ಯಾರ್ಥಿಗಳೂ ಹಚ್ಚಿದ್ದ ಟೈರ್‌ಗೆ ಬೆಂಕಿಯನ್ನು ಪೊಲೀಸರು ನಂದಿಸಿದರು.ಪ್ರತಿಭಟನೆಯಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಮೌನೀಶ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ, ಪೃಥ್ವಿಕುಮಾರ, ವಿಜಯ ಕಲ್ಲೂರ, ದಾನೇಶ, ಸಂಜನಾ ಹಿರೇಮಠ, ರಕ್ಷಿತಾ, ಅರ್ಚಿತಾ ಸೇರಿದಂತೆ ಇತರರು ಇದ್ದರು.