ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಮೃತರಿಗೆ ಅಂತಿಮ ನಮನ । ಕೊಲ್ಲುವವರಿಗೆ ಧರ್ಮವೇ ಇಲ್ಲ: ಕೈ ಮುಖಂಡ
ಕಾಶ್ಮೀರದಲ್ಲಿ ನಡೆದ ಭಯೋತ್ಪಾಕರ ದಾಳಿಯಿಂದ ಸಾವನಪ್ಪಿದ ಪ್ರವಾಸಿಗರಿಗೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಗುರುವಾರ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಾಶ್ಮೀರದಲ್ಲಿ ನಡೆದಿರುವ ಘಟನೆ ಅಮಾನವೀಯವಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತಹ ಘಟನೆಯಾಗಿದೆ. ಯಾವ ಧರ್ಮಗಳೂ ಕೊಲ್ಲಲು ಹೇಳುವುದಿಲ್ಲ. ಕೊಲ್ಲುವವರಿಗೆ ಧರ್ಮವೇ ಇಲ್ಲ. ಮಾನವ ಸಮಾಜ ತಲೆತಗ್ಗಿಸುವಂತಹ ಹೇಯಕೃತ್ಯವಿದು. ಶಿವಮೊಗ್ಗದ ಮಂಜುನಾಥ್ ಕೂಡ ಬಲಿಯಾಗಿದ್ದಾರೆ. ಈ ಕುಟುಂಬದ ಜೊತೆ ನಾವಿರುತ್ತೇವೆ ಎಂದರು.ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೇಶ್ ಮಾತನಾಡಿ, ಭಾರತವನ್ನು ಉಗ್ರರಿಂದ ರಕ್ಷಿಸಬೇಕಾಗಿದೆ. ಈ ಕೃತ್ಯ ಎಸಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು. ಉಗ್ರರ ದಾಳಿಯಿಂದ ಜನ ಸತ್ತ ಮೇಲೆ ‘ನಾವು ಬಿಡುವುದಿಲ್ಲ’ ಎಂದು ಕೇಂದ್ರ ಸರಕಾರ ಹೇಳಿಕೆ ನೀಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದರು.