ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 12:36 AM IST
 23ಕೆಡಿವಿಜಿ1, 2-ಕೇಂದ್ರದ ತೈಲ, ಅನಿಲ, ಚಿನ್ನದ ಬೆಲೆ ಏರಿಕೆ ವಿರುದ್ಧ ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು................23ಕೆಡಿವಿಜಿ3-ಕೇಂದ್ರದ ತೈಲ, ಅನಿಲ, ಚಿನ್ನದ ಬೆಲೆ ಏರಿಕೆ ವಿರುದ್ಧ ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಇತರರು ಪಾಲ್ಗೊಂಡಿದ್ದು, ದಿನೇಶ ಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ: ತೈಲ, ಅನಿಲ, ಚಿನ್ನದ ಬೆಲೆ ಏರಿಕೆ ಖಂಡಿಸಿ, ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಇಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಖಾಲಿ ಸಿಲಿಂಡರ್‌ಗಳ ಸಮೇತ ಬುಧವಾರ ಪ್ರತಿಭಟಿಸಲಾಯಿತು.

ದಾವಣಗೆರೆ: ತೈಲ, ಅನಿಲ, ಚಿನ್ನದ ಬೆಲೆ ಏರಿಕೆ ಖಂಡಿಸಿ, ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಇಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಖಾಲಿ ಸಿಲಿಂಡರ್‌ಗಳ ಸಮೇತ ಬುಧವಾರ ಪ್ರತಿಭಟಿಸಲಾಯಿತು. ನಗರದ ಶ್ರೀ ಜಯದೇವ ವೃತ್ತದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಏಳು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರವು ಜನಸ್ನೇಹಿ ಆಡಳಿತ ನೀಡಿತ್ತು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಕೇವಲ 410 ರು. ಇತ್ತು. ಈಗ ಬಿಜೆಪಿ ನೇತೃತ್ವದ ಎನ್‌ಡಿಎ ಆಳ್ವಿಕೆಯಲ್ಲಿ 900 ರು.ನಿಂದ 1 ಸಾವಿರ ರು.ಗೆ ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಪೆಟ್ರೊಲ್-ಡೀಸೆಲ್ ಬೆಲೆ ಗಗನಮುಖಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತೈಲ, ಅನಿಲ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜನ ಸಾಮಾನ್ಯರ ಆರ್ಥಿಕತೆಗೆ ಕೇಂದ್ರ ಸರ್ಕಾರ ದೊಡ್ಡಮಟ್ಟದ ಆರ್ಥಿಕ ಹೊಡೆತ ನೀಡುತ್ತಿದೆ. ಬಿಜೆಪಿ ಆಳ್ವಿಕೆಯಲ್ಲಿ ದೇಶದ ಜನರಿಗೆ ಬೆಲೆ ಏರಿಕೆ ಬರೆ ಹಾಕುವ ಕೆಲಸ ನಡೆಯುತ್ತಲೇ ಇದೆ. ರಾಜ್ಯದ ಪಾಲಿನ ಜಿಎಸ್‌ಟಿ ಹವನ್ನು ಕೊಡದೇ, ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನ ವಿರೋಧಿ, ಬೆಲೆ ಏರಿಕೆ ನೀತಿ ವಿರುದ್ಧ ನಮ್ಮ ಮುಖಂಡರು, ಕಾರ್ಯಕರ್ತರು ಕೇವಲ ಒಂದು ದಿನ ಪ್ರತಿಭಟನೆ, ಧರಣಿ ಮಾಡಿ, ಬಿಡುವುದಲ್ಲ. ಪ್ರತಿಭಟನೆಯ ಮೂಲ ಉದ್ದೇಶವನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಕೇಂದ್ರದ ಧೋರಣೆ, ರಾಜ್ಯವನ್ನು ಕಡೆಗಣಿಸುತ್ತಿರುವ ಬಗ್ಗೆಯೂ ಜನರಿಗೆ ತಿಳಿಸುವ ಕೆಲಸ ಆಗಬೇಕು. ಆಗ ಮಾತ್ರ ನಮ್ಮ ಪಕ್ಷದ ಹೋರಾಟದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ಸುಳ್ಳು ಹೇಳಿಕೊಂಡೇ ಮತ್ತೊಂದು ಅವಧಿಗೆ ಪ್ರಧಾನಿಯಾದ ನರೇಂದ್ರ ಮೋದಿ ಸರ್ಕಾರದಿಂದ ಜನ ರೋಸಿದ್ದಾರೆ. ಕೇಂದ್ರ ಸರ್ಕಾರ ಯಾವಾಗ ಹೋಗುತ್ತದೋ ಎಂಬುದಾಗಿ ಕಾಯುತ್ತಿದ್ದಾರೆ. ಆರೂವರೆ ದಶಕ ಅಧಿಕಾರ ನಡೆಸಿದ ಕಾಂಗ್ರೆಸ್ ಅಧಿಕಾರ ಮಾಡಿಲ್ಲವೆಂದು ಸುಳ್ಳು ಹೇಳಿ, ಮೊಸಳೆ ಕಣ್ಣೀರು ಹಾಕಿ ಅಧಿಕಾರಕ್ಕೆ ಬಂದಿದ್ದಾರೆ. ರೈತರಿಗೆ ಅನುಕೂಲ ಮಾಡಲು ಹಾಲಿದ ದರ ಹೆಚ್ಚಿಸಿದರೆ ಜನರಿಗೆ ತಪ್ಪು ಸಂದೇಶ ನೀಡುವ ಕೆಲಸ ಬಿಜೆಪಿ ಮಾಡುತ್ತಿದ್ದು, ತೈಲ, ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಸಿದರೂ ಸ್ವಪಕ್ಷದ ವಿರುದ್ಧ ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿ, ಕೊಟ್ಟ ಭರವಸೆಯನ್ನು ಉಳಿಸಿಕೊಂಡ ಯಾವುದಾದರೂ ಸರ್ಕಾರವಿದ್ದರೆ ಮತ್ತು ಆಹಾರ ಭದ್ರತೆ, ಶಿಕ್ಷಣ ಕೊಟ್ಟಿದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ. ಅನಿಲ, ತೈಲ, ಚಿನ್ನದಲ ದರ ಏರಿಕೆಯನ್ನು ತಕ್ಷಣ ಇಳಿಸದಿದ್ದರೆ, ಎಐಸಿಸಿ, ಕೆಪಿಸಿಸಿ ನಾಯಕರ ನೇತೃತ್ವದಲ್ಲಿ ಪಂಚಾಯ್ತಿ ಮಟ್ಟದಿಂದ ಹೋರಾಟ ನಡೆಸುವ ಜೊತೆಗೆ ರಾಜ್ಯದ ಬಿಜೆಪಿ ಸಂಸದರ ಮನೆ ಮುಂದೆ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು. ಪಕ್ಷದ ಮುಖಂಡರಾದ ಸುರಭಿ ಎಸ್.ಶಿವಮೂರ್ತಿ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಎ.ನಾಗರಾಜ, ಪಾಮೇನಹಳ್ಳಿ ನಾಗರಾಜ, ಸೋಮಲಾಪುರ ಹನುಮಂತಪ್ಪ, ಎಚ್.ಜೆ.ಮೈನುದ್ದೀನ್, ಶುಭಮಂಗಳ, ದಾಕ್ಷಾಯಣಮ್ಮ, ಕವಿತಾ ಚಂದ್ರಶೇಖರ, ಡೋಲಿ ಚಂದ್ರು, ನಿಟುವಳ್ಳಿ ಪ್ರವೀಣ, ಅನೀಸ್ ಪಾಷ, ಚೆಸ್‌ ಯುವರಾಜ, ಸುಷ್ಮಾ ಪಾಟೀಲ್, ಜಿ.ರಾಕೇಶ ಗಾಂಧಿ ನಗರ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು. ನ್ಯಾಷನಲ್ ಹೆರಾಲ್ಡ್‌ನಲ್ಲಿ ಹಗರಣವೇ ನಡೆದಿಲ್ಲ. ಯಾವುದೇ ಆಸ್ತಿ, ಹಣ ದುರುಪಯೋಗವಾಗಿಲ್ಲ. ಹೆರಾಲ್ಡ್‌ನ ಮುಖ್ಯ ಉದ್ದೇಶವೆಂದರೆ ಹಳೆಯ ಡೆಪ್ಟ್ ಕ್ಲಿಯರ್ ಮಾಡಲು ಒನ್ ಇಂಡಿಯಾ ಕಂಪನಿ ಆರಂಭಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಹಗರಣದಲ್ಲಿ ಸಿಲುಕಿಸಿದಂತೆ ಸೋನಿಯಾ, ರಾಹುಲ್ ಅವರನ್ನು ನ್ಯಾಷನಲ್ ಹೆರಾಲ್ಡ್‌ನಲ್ಲಿ ಸಿಲುಕಿಸಿ, ಇಡಿ ಬಳಸಿ, ಬಿಜೆಪಿಯವರು ರಾಜಕೀಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರಷ್ಟೇ.- ಡಾ.ಪ್ರಭಾ ಮಲ್ಲಿಕಾರ್ಜುನ, ದಾವಣಗೆರೆ ಸಂಸದೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?