ಧಾರವಾಡ: ಬಲವಂತದ ಭೂ ಸ್ವಾಧೀನ ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಬುಧವಾರ ದೇವನಹಳ್ಳಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟದಲ್ಲಿ ಹೋರಾಟಗಾರರನ್ನು ಪೊಲೀಸರು ದೌರ್ಜನ್ಯದಿಂದ ಬಂಧಿಸಿರುವ ಕ್ರಮ ಖಂಡಿಸಿ ಗುರುವಾರ ವಿವೇಕಾನಂದ ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿಯಿಂದ ಪ್ರತಿಭಟಿಸಲಾಯಿತು.
ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವಂತೆ ಇಲ್ಲ ಎನ್ನುವ ಕಾನೂನಿದ್ದರೂ ಸಹ ಒಂದು ಕಡೆ ದೌರ್ಜನ್ಯದಿಂದ, ಇನ್ನೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಮಾಡಿರುವ ಮಹಾ ದ್ರೋಹ ಇದಾಗಿದೆ.
ರೈತರನ್ನು ಬೀದಿಗೆ ತಳ್ಳಲಿರುವ ಈ ಸ್ವಾಧೀನ ನಿರ್ಧಾರವು ರದ್ದಾಗಿ ರೈತರ ಭೂಮಿ ರೈತರಿಗೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ರೈತರ ಹೋರಾಟದೊಂದಿಗೆ ನಿಲ್ಲುತ್ತದೆ ಎಂದು ಹೇಳುತ್ತಾ ಭೂಮಿಗಾಗಿ, ಜೀವನಕ್ಕಾಗಿ ಹೋರಾಡುತ್ತಿರುವ ರೈತರ ಜನತಾಂತ್ರಿಕ ಹಕ್ಕನ್ನು ಪೊಲೀಸ್ ದೌರ್ಜನ್ಯದ ಮೂಲಕ ದಮನ ಮಾಡುವ ಹೀನ ಯತ್ನವನ್ನು ಕೈಬಿಟ್ಟು, ಬಂದಿಸಿರುವ ಎಲ್ಲ ನಾಯಕರನ್ನು ಬೇಷರತ್ತಾಗಿ ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಕೂಡಲೇ ರೈತರ ಭೂಮಿಯನ್ನು ರೈತರಿಗೆ ನೀಡಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ದೀಪಾ ಧಾರವಾಡ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮಿತಿ ಮುಖಂಡ ಲಕ್ಷ್ಮಣ ಬಕ್ಕಾಯಿ, ಎಐಯುಟಿಯುಸಿನ ಗಂಗಾಧರ ಬಡಿಗೇರ, ಶರಣು ಗೋನವಾರ, ಬಸಪ್ಪ ನೇಕಾರ, ಬಸಪ್ಪ ಬಡಾರಿ ಸೇರಿದಂತೆ ಹಲವರಿದ್ದರು.