ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಾಳೇನಹಳ್ಳಿ ಬಳಿಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕ್ರಷರ್ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈ ಭಾಗದ ರಸ್ತೆಯಲ್ಲಿ ಪ್ರತಿನಿತ್ಯ ಗಣಿಗಾರಿಕೆ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಯೆಲ್ಲಾ ಗುಂಡಿಮಯವಾಗಿ ತೀರಾ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯಕ್ಕಿಂತ ಹೆಚ್ಚಿನ ಲೋಡ್ ನೊಂದಿಗೆ ಸಂಚರಿಸುವ ವಾಹನಗಳ ಹಾವಳಿಯಿಂದಾಗಿ ಸ್ಥಳೀಯರು, ರೈತರು ಹಾಗೂ ವಿದ್ಯಾರ್ಥಿಗಳು ಓಡಾಡಲು, ನಿದ್ದೆ ಮಾಡಲು ಆಗುತ್ತಿಲ್ಲ. ಯಾವಾಗ ಏನಾಗಲಿದೆಯೋ ಎಂಬ ಆತಂಕದೊಂದಿಗೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಕ್ರಷರ್‌ನಿಂದ ಬರುವ ರಾಯಲ್ಟಿ ಹಣ ಪಡೆದು ಕುಳಿತುಕೊಂಡಿದೇ ವಿನಃ ರಸ್ತೆಗಳ ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ರಸ್ತೆ ಸಂಪೂರ್ಣ ಧೂಳಿನಿಂದ ಆವರಿಸಿದ್ದು, ಮನೆ ಹಾಗೂ ಬೆಳೆಗಳಿಗೆ ಹಾನಿಯುಂಟು ಮಾಡುತ್ತಿರುವ ಜೊತೆಗೆ ಮಕ್ಕಳು ಹಾಗೂ ವಯೋವೃದ್ದರು ಕಾಯಿಲೆಯಿಂದ ಬಳಲುವಂತಾಗಿದೆ. ಒಮ್ಮೊಮ್ಮೆ ರಸ್ತೆಗೆ ನೀರು ಹಾಕುವುದರಿಂದ ರಸ್ತೆಯೆಲ್ಲಾ ಕೆಸರು ಮಯವಾಗಿ, ಗ್ರಾಮದಲ್ಲಿ ನಡೆದುಕೊಂಡುವ ಹೋಗುವವರು ಹಲವ ಬಾರಿ ಬಿದ್ದು, ಕೈ ಕಾಲುಗಳಿಗೆ ಗಾಯವಾಗಿರುವ ಘಟನೆಗಳು ನಡೆದಿವೆ. ಹಾಗಾಗಿ ಇಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸಂಬಂಧಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ಕಲ್ಲು ಕ್ವಾರೆಗಳನ್ನು ಸ್ಥಗಿತಗೊಳಿಸಬೇಕು. ಜೊತೆಗೆ ಗ್ರಾಮದಲ್ಲಿ ಗುಂಡಿಬಿದ್ದು ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಆಗ್ರಹಿಸಿದರು.