ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಸಂಘಟನೆ ರಾಜ್ಯ ಸಂಚಾಲಕ ಆವರಗೆರೆ ವಾಸು ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಮುಖಂಡರು, ಕಾರ್ಯಕರ್ತರು ನಂತರ ಉಪ ವಿಭಾಗಾಧಿಕಾರಿ ಕಚೇರಿ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಪತ್ರ ಅರ್ಪಿಸಿದರು.
ಇದೇ ವೇಳೆ ಮಾತನಾಡಿದ ಆವರಗೆರೆ ವಾಸು, ನಮ್ಮ ಹಣ ನಮ್ಮ ಹಕ್ಕು ಘೋಷಣೆಯೊಂದಿಗೆ ಭೋವಿ, ವಾಲ್ಮೀಕಿ ನಿಗಮಗಳು ಸೇರಿ ವಿವಿಧ ನಿಗಮಗಳಲ್ಲಿ ಆಗಿರುವ ಭ್ರಷ್ಟಾಚಾರವನ್ನು ಖಂಡಿಸುತ್ತೇವೆ. ದಲಿತರು, ದಮನಿತರ ಮೇಲಾಗುತ್ತಿರುವ ದೌರ್ಜನ್ಯ ನಿಲ್ಲಿಸುವಂತೆ ತಮ್ಮ ಜೀವನವಿಡೀ ಹೋರಾಡಿದ ಕ್ರಾಂತಿಕಾರಿ ಕವಿ ಅಣ್ಣಾಭಾವು ಸಾಠೆ ಜಯಂತಿ ಅಂಗವಾಗಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನವು ರಾಜ್ಯವ್ಯಾಪಿ ಇಂದು ಎಸಿ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆ ಹಣವನ್ನು ಅನ್ಯ ಯೋಜನೆಗಳಿಗೆ ಬಳಸುವುದನ್ನು ಹಾಗೂ ವರ್ಗಾವಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಮೂಲಕ ಮೀಸಲಿಟ್ಟ ಹಣ ವರ್ಗಾವಣೆಗೆ ಸಹಕಾರಿಯಾಗುತ್ತಿರುವ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಸೆಕ್ಷನ್ 7(ಸಿ) ಮತ್ತು 7(ಡಿ)ಯನ್ನು ತಕ್ಷಣ ರದ್ಧು ಪಡಿಸಬೇಕು ಎಂದು ಒತ್ತಾಯಿಸಿದರು.
ಭೋವಿ, ವಾಲ್ಮೀಕಿ ಸೇರಿ ತಳ ಸಮುದಾಯಗಳ ಅಭಿವೃದ್ಧಿ ನಿಗಮಗಳಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆ ನಡೆಸಿ, ತಪ್ಪಿತಸ್ತ ಅಧಿಕಾರಿಗಳು, ಜನ ಪ್ರತಿನಿಧಿಗಳು ವಿರುದ್ಧ ಅಟ್ರಾಸಿಟಿ ಸೇರಿ ಇತರೆ ಕ್ರಿಮಿನಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಬೇಕು. ರಾಮನಗರದ ಘಟನೆ ಸೇರಿ ದಲಿತರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರ ವಿಫಲವಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಂಡು, ಅಂತಹ ಪ್ರಕರಣ ಮರುಕಳಿಸದಂತಹ ವಾತಾವರಣ ಕಲ್ಪಿಸಲಿ ಎಂದು ಮನವಿ ಮಾಡಿದರು.
ಸಂಘಟನೆ ರುದ್ರೇಶ, ಮಲ್ಲೇಶ, ಹನುಮಂತ ನಿಟುವಳ್ಳಿ, ಹರ್ಷ, ಹನುಮಂತ ನರಗನಹಳ್ಳಿ, ರಾಜು ಕೆರೆಯಾಗಳಹಳ್ಳಿ, ಬಸವರಾಜ ನಿಟುವಳ್ಳಿ, ಎಸ್.ಚಂದ್ರಪ್ಪ, ಸುರೇಶ, ಉಚ್ಚೆಂಗೆಪ್ಪ, ಚಿನ್ನಪ್ಪ, ವಿ.ಲಕ್ಷ್ಮಣ, ಪರಶುರಾಮ, ರಂಗಪ್ಪ ಫೋಟ, ಸಿ.ರಮೇಶ, ಚೌಡಪ್ಪ, ಭರತ್, ನಂದೀಶ, ಸಿ.ಗುರುಮೂರ್ತಿ, ಮೋಹನ, ರೇಣುಕಮ್ಮ, ಮೈಲಮ್ಮ, ಕವಿತಾ, ಶೀಲಮ್ಮ ಇತರರು ಇದ್ದರು.
ದಾವಣಗೆರೆ ಎಸಿ ಕಚೇರಿ ಬಳಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಜಿಲ್ಲಾ ಸಮಿತಿಯು ಆವರಗೆರೆ ವಾಸು ನೇತೃತ್ವದಲ್ಲಿ ಪ್ರತಿಭಟಿಸಿ, ಅಧಿಕಾರಿಗಳ ಮುಖಾಂತರ ಸಿಎಂ, ಸಮಾಜ ಕಲ್ಯಾಣ ಸಚಿವರಿಗೆ ಮನವಿ ಅರ್ಪಿಸಲಾಯಿತು.