ಸೀರೆ ಉಡುವುದು ಪೂಜ್ಯತೆ, ಶ್ರೇಷ್ಟತೆಯ ಸಂಕೇತ: ಶ್ರೀ ಸುಗುಣೇಂದ್ರ ತೀರ್ಥರು

KannadaprabhaNewsNetwork | Published : Aug 2, 2024 12:52 AM

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಪದ್ಮಶಾಲಿ ನೇಕಾರರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಆ.1ರಿಂದ 11ರ ವರೆಗೆ ಕೈಮಗ್ಗ ಸೀರೆಗಳ ಉತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಇಂದು ಉಡುಗೆ ತೊಡುಗೆಗಳಲ್ಲಿ ಆಧುನಿಕತೆ ಬಂದಿದೆ, ಅದು ಮೇಲ್ನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ದೇಹಕ್ಕೆ ಹಿತವಲ್ಲ. ನಮ್ಮ ಪ್ರಾಚೀನ ಉಡುಗೆ ತೊಡುಗೆಗಳಿಂದ ದೀರ್ಘಕಾಲೀನ ಲಾಭ ಹೆಚ್ಚು ಎಂದು ಕೃಷ್ಣಮಠದ ಪರ್ಯಾಯ ಪೀಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಗುರುವಾರ ಕೃಷ್ಣಮಠದ ರಾಜಾಂಗಣದಲ್ಲಿ ಪದ್ಮಶಾಲಿ ನೇಕಾರರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘಗಳ ವತಿಯಿಂದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಆ.1ರಿಂದ 11ರ ವರೆಗೆ ನಡೆಯುವ ಕೈಮಗ್ಗ ಸೀರೆಗಳ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಹೆಣ್ಣುಮಕ್ಕಳು ಸೀರೆಯನ್ನು ಉಡುವುದು ನಮ್ಮ ಸಂಸ್ಕೃತಿಯ ಪೂಜ್ಯತೆಯ ಶ್ರೇಷ್ಠತೆಯ ಸಂಕೇತವಾಗಿದೆ. ಸೀರೆಯ ಪಾವಿತ್ರ್ಯತೆ ಬೇರೆ ಬಟ್ಟೆಗಳಲ್ಲಿ ಸಿಗುವುದಿಲ್ಲ, ಈ ಹಿನ್ನೆಲೆಯಲ್ಲಿ ಕೈಮಗ್ಗದ ಸೀರೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಇಂದು ಅನೇಕ ದೇವಾಲಯಗಳಲ್ಲಿ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ, ಕೃಷ್ಣಮಠದಲ್ಲಿಯೂ ಡ್ರೆಸ್ ಕೋಡ್ ಜಾರಿಗೆ ತರಲು ಒತ್ತಾಯ, ಒತ್ತಡಗಳಿವೆ ಎಂದ ಶ್ರೀಗಳು, ಹಬ್ಬಗಳು ಆರಂಭವಾಗುವುದೇ ಹೊಸ ಬಟ್ಟೆಗಳ ಖರೀದಿಯಿಂದ, ಉಡುಪಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ಆಚರಣೆ ಸೀರೆಗಳ ಉತ್ಸವದಿಂದ ಆರಂಭವಾಗುತ್ತಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಡುಪಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಭಾಕರ ನಾಯಕ್ ಅಮ್ಮುಂಜೆ, ನಗರಸಭೆ ಪೌರಾಯುಕ್ತ ರಾಯಪ್ಪ, ನಗರಸಭಾ ಸದಸ್ಯರಾದ ರಂಜನಿ ಹೆಬ್ಬಾರ್, ಟಿ.ಜಿ.ಹೆಗ್ಡೆ, ಉದ್ಯಮಿಗಳಾದ ಅಜಯ್ ಪಿ.ಶೆಟ್ಟಿ, ಗಣೇಶ್ ಪಾಟೀಲ್, ಹರಿಯಪ್ಪ ಕೋಟ್ಯಾನ್, ದಂತವೈದ್ಯ ಡಾ,ವಿಜಯೇಂದ್ರ, ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಿಇಓ ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಉತ್ಸವದ ಆಯೋಜನಾ ಸಮಿತಿ ಅಧ್ಯಕ್ಷ ಚಂದನ್ ಶೆಟ್ಟಿಗಾರ್ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸದಾಶಿವ ಗೋಳಿಜೋರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಮಂಜುನಾಥ ಮಣಿಪಾಲ್, ಸರೋಜ ಶೆಟ್ಟಿಗಾರ್ ಮುಂತಾದವರು ಉಪಸ್ಥಿತರಿದ್ದರು.

Share this article