ಕನ್ನಡಪ್ರಭ ವಾರ್ತೆ ಟಿ. ನರಸೀಪುರರೈತರು ಬ್ಯಾಂಕಿನಿಂದ ಪಡೆದಿರುವ ಕೃಷಿ ಸಾಲಕ್ಕೆ ಓಟಿಎಸ್ ಯೋಜನೆಯಡಿ ರಿಯಾಯಿತಿ ನೀಡದೇ ಸಾರ್ವಜನಿಕ ಹಣಕಾಸು ಕಾಯಿದೆ ಪ್ರಕರಣ ದಾಖಲಿಸಿರುವ ಪಟ್ಟಣದ ಯೂನಿಯನ್ ಬ್ಯಾಂಕಿನವ್ಯವಸ್ಥಾಪಕರ ನಡೆಯನ್ನು ಖಂಡಿಸಿ ರೈತರು ಬ್ಯಾಂಕಿನಮುಂದೆ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಯೂನಿಯನ್ ಬ್ಯಾಂಕಿನಮುಂದೆ ಜಮಾಯಿಸಿದ ರೈತರು ಬ್ಯಾಂಕಿನ ನಡೆ ಖಂಡಿಸಿ ಬ್ಯಾಂಕಿನ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. ರಾಜ್ಯ, ಕೇಂದ್ರ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ವಿರುದ್ದ ಪ್ರತಿಭಟನಾ ನಿರತರು ಧಿಕ್ಕಾರದ ಘೋಷಣೆ ಕೂಗಿದರು.ವಕೀಲ ರವಿಶಂಕರ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದಲೂ ಕಬ್ಬು ಬೆಳೆದಿರುವ ಈ ಭಾಗದ ರೈತರು ಸೂಕ್ತ ಸಮಯದಲ್ಲಿಕಬ್ಬು ಕಟಾವು ಮಾಡಲು ಸಾಧ್ಯವಾಗಿಲ್ಲ. 18 ರಿಂದ 20 ತಿಂಗಳಿಗೆ ಕಬ್ಬು ಕಟಾವು ಮಾಡಿ ರೈತ ನಷ್ಟ ಅನುಭವಿಸಿದ್ದಾನೆ, ಕಬ್ಬು ಖರೀದಿಸುವ ಕಾರ್ಖಾನೆ ಅವರು ಮಾರಾಟ ಮಾಡಿದ ಕಬ್ಬಿನ ಹಣ ಕೊಡಲು 2 ರಿಂದ 3 ತಿಂಗಳು ಸತಾಯಿಸಿದ್ದಾರೆ, ಭತ್ತಕ್ಕೆ ಸೂಕ್ತ ಬೆಲೆ ದೊರಕಿಲ್ಲ, ಕೋವಿಡ್ ಮಾರಿ ದೇಶಾದ್ಯಂತ ಹರಡಿದ ವೇಳೆ 6 ತಿಂಗಳು ಕಾಲ ರೈತ ತಾನು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಇಂತಹ ಸಂದರ್ಭದಲ್ಲಿ ರೈತರು ತಮ್ಮ ಸುಸ್ತಿ ಸಾಲವನ್ನು ಓಟಿಎಸ್ ಯೋಜನೆಯ ಮೂಲಕ ಬೇರೆ ವಾಣಿಜ್ಯ ಬ್ಯಾಂಕ್ ಗಳು ಸಾಲದ ಹಣಕ್ಕೆ ಶೇ. 80 ರಷ್ಟು ರಿಯಾಯಿತಿ ನೀಡಿ ಸಾಲದಿಂದ ರೈತ ಋಣ ಮುಕ್ತ ರಾಗಲೂ ಅವಕಾಶ ನೀಡಿದ್ದರೆ, ಯೂನಿಯನ್ ಬ್ಯಾಂಕಿನವರು ಮಾತ್ರ ಈ ಯೋಜನೆಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.ಇತರೆ ವಾಣಿಜ್ಯ ಬ್ಯಾಂಕುಗಳು ರೈತ ಪಡೆದ ಸಾಲದ ಶೇ. 20 ರಷ್ಟು ಹಣ ಕಟ್ಟಿಸಿಕೊಂಡು ರೈತ ಪಡೆದ ಸಾಲವನ್ನು ಸಂಪೂರ್ಣ ಮಾಡುತ್ತಿದ್ದರೆ, ಯೂನಿಯನ್ ಬ್ಯಾಂಕಿನವರು ಮಾತ್ರ ಓಟಿಎಸ್ ಯೋಜನೆಗೆ ಸ್ಪಂದನೆ ನೀಡುತ್ತಿಲ್ಲ, ಕೇವಲ 10 ರಿಂದ 20 ಪರ್ಸೆಂಟ್ ಮಾತ್ರವೇ ರಿಯಾಯಿತಿ ನೀಡುತ್ತೇವೆ ಎಂದು ರೈತರನ್ನು ಸಂಕಷ್ಟಕ್ಕೆ ದೂಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ದೂರಿದರು.ಬಿಜೆಪಿ ಮುಖಂಡ ಬಸವರಾಜು, ರೈತ ಮುಖಂಡ ಮಹದೇವಸ್ವಾಮಿ ಮಾತನಾಡಿ, ಇತರೆ ಬ್ಯಾಂಕುಗಳಂತೆ ಓಟಿಎಸ್ ನೀಡಿರುವ ಕ್ರಮದಲ್ಲಿ ರೈತರ ಸುಸ್ತಿಯನ್ನು ಕಟ್ಟಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪರವರು ಈ ಕೂಡಲೇ ಇತ್ತ ಗಮನಹರಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.ಶಿರಸ್ತೇದಾರ್ ಮಂಜುಳಾ ಅವರಿಗೆ ಪ್ರತಿಭಟನಾ ರೈತರು ಮನವಿ ಸಲ್ಲಿಸಿದರು.ರೈತ ಮುಖಂಡರಾದ ಲೋಕೇಶ್, ನಟರಾಜು, ಶೇಖರಪ್ಪ, ಮಹಾದೇವಸ್ವಾಮಿ, ಪ್ರಕಾಶ್, ಸಿದ್ದರಾಜು, ಸಿದ್ದಪ್ಪ, ಶೀಲಾ, ಚಿನ್ನಸ್ವಾಮಿ, ರೇಚಣ್ಣಸ್ವಾಮಿ, ರಾಜಮ್ಮ, ಚಿಕ್ಕೀರಮ್ಮ, ಶೇಖರಪ್ಪ, ಬಿ.ಎಸ್. ಶಾಂತಿ, ಶಿವಮಲ್ಲು, ರಮೇಶ್, ಶಿವರಾಜು, ಪುಟ್ಟಮಲ್ಲಯ್ಯ, ಮಲ್ಲೇಶ್, ಮಹದೇವ, ಸಿದ್ದರಾಜು, ಬನ್ನೂರು ರಾಮಕೃಷ್ಣ, ಶಿವಶಂಕರ್, ನಾಗಸುಂದ್ರಪ್ಪ ಇದ್ದರು.