ಜಾನಕಿ ಸೇರಿ ಅಗಲಿದೆ 15 ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ

KannadaprabhaNewsNetwork |  
Published : Aug 14, 2026, 01:30 AM IST
ಸದನ ಕಲಾಪ | Kannada Prabha

ಸಾರಾಂಶ

ಕಳೆದ ಅಧಿವೇಶನದಿಂದ ಈಚೆಗೆ ನಿಧನ ಹೊಂದಿದ ಹಾಲಿ ಸಚಿವರಾಗಿದ್ದ ಡಿ.ಸುಧಾಕರ್‌, ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಸಿ.ವೀರಣ್ಣ, ಮಾಜಿ ಸಚಿವರಾದ ವೆಂಕಟರಮಣಪ್ಪ, ರಾಮಚಂದ್ರಗೌಡ, ಗಾನಕೋಗಿಲೆ ಎಸ್‌.ಜಾನಕಿ, ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಸೇರಿದಂತೆ 15 ಮಂದಿ ಗಣ್ಯರ ಅಗಲಿಕೆಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಿ ನಿರ್ಣಯ ಅಂಗೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕಳೆದ ಅಧಿವೇಶನದಿಂದ ಈಚೆಗೆ ನಿಧನ ಹೊಂದಿದ ಹಾಲಿ ಸಚಿವರಾಗಿದ್ದ ಡಿ.ಸುಧಾಕರ್‌, ವಿಧಾನಸಭೆ ಮಾಜಿ ಉಪಸಭಾಧ್ಯಕ್ಷ ಸಿ.ವೀರಣ್ಣ, ಮಾಜಿ ಸಚಿವರಾದ ವೆಂಕಟರಮಣಪ್ಪ, ರಾಮಚಂದ್ರಗೌಡ, ಗಾನಕೋಗಿಲೆ ಎಸ್‌.ಜಾನಕಿ, ಎಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮ ಸೇರಿದಂತೆ 15 ಮಂದಿ ಗಣ್ಯರ ಅಗಲಿಕೆಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಿ ನಿರ್ಣಯ ಅಂಗೀಕರಿಸಲಾಯಿತು.

ವಿಧಾನಸಭೆಯಲ್ಲಿ ಹಂಗಾಮಿ ಸಭಾಧ್ಯಕ್ಷ ಟಿ.ಬಿ.ಜಯಚಂದ್ರ ಅವರು ಸಂತಾಪ ನಿರ್ಣಯ ಮಂಡಿಸಿದರು.

ಸಚಿವರಾಗಿದ್ದಾಗಲೇ ನಿಧನ ಹೊಂದಿದ ಡಿ.ಸುಧಾಕರ್‌, ಮಾಜಿ ಸಚಿವರಾದ ವೆಂಕಟರಮಣಪ್ಪ, ರಾಮಚಂದ್ರಗೌಡ, ವಿಧಾನಸಭೆ ಮಾಜಿ ಸದಸ್ಯರಾದ ಕೆ.ಆರ್‌.ಶ್ರೀನಿವಾಸಯ್ಯ, ಎಸ್‌.ಎಚ್‌.ಪುಟ್ಟರಂಗನಾಥ್‌, ಸೈಯದ್‌ ಯಾಸಿನ್‌, ವಿ.ಶ್ರೀನಿವಾಸನ್‌, ಎಚ್‌.ಎಂ.ಚಂದ್ರಶೇಖರಪ್ಪ, ಆರ್.ಜಿ.ವೆಂಕಟಾಚಾಲಯ್ಯ, ಎಸ್.ಕೃಷ್ಣಪ್ಪ, ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಅವರಿಗೆ ಸಂತಾಪ ಸೂಚಿಸಿದರು.

ಇದೇ ವೇಳೆ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ, ಆಶಾ ಭೋಸ್ಲೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಲು ನಿರ್ಣಯ ಮಂಡಿಸಿದರು.

ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶ್ಲೋಕ, ಸುಭಾಷಿತಗಳೊಂದಿಗೆ ಅಗಲಿದ ಗಣ್ಯರಿಗೆ ನುಡಿನಮನ ಸಲ್ಲಿಸಿದರು. ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೇ.. ಅಳಲೇಕೆ, ಸುಖವೇ ಬರಲಿ, ದುಃಖವೇ ಬರಲಿ, ರೋಗ ಭೋಗವೇ ಇರಲಿ, ಎಲ್ಲಾ ಹೊತ್ತು, ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು ಎಂದು ಸಾವಿನ ಸತ್ಯ ವ್ಯಾಖ್ಯಾನಿಸಿದರು. ಡಿ. ಸುಧಾಕರ್ ಅವರೊಂದಿಗಿನ ಒಡನಾಟ ನೆನೆದ ಅವರು, ವೆಂಕಟರಮಣಪ್ಪ ಅವರನ್ನು ತೋಳ ಎನ್ನುತ್ತಿದ್ದುದು ಹಾಗೂ ಸಜ್ಜನ ರಾಜಕಾರಣಿ ರಾಮಚಂದ್ರಗೌಡ ಅವರ ಸಂಬಂಧ ಹಾಗೂ ಒಡನಾಟ ಸ್ಮರಿಸಿದರು.ಚನ್ನಮ್ಮ ಸರಳವಾಗಿ ಬದುಕಿದ ಹಿರಿಜೀವ: ಸಿಎಂ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚನ್ನಮ್ಮನವರ ಅಂತ್ಯಕ್ರಿಯೆಯ ವಿಚಾರವಾಗಿ ಅನೇಕ ಚರ್ಚೆಗಳು ನಡೆದವು. ಆದರೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ನಾನು ಗಟ್ಟಿ ನಿರ್ಧಾರ ತೆಗೆದುಕೊಂಡೆ. ದೇವೇಗೌಡರ ಧರ್ಮಪತ್ನಿ ಚನ್ನಮ್ಮ ಅವರು ಸರಳವಾಗಿ ಬದುಕಿದ ಜೀವ. ರಾಜಕಾರಣಿಗಳ ಮನೆಯಲ್ಲಿ ಹೆಣ್ಣುಮಕ್ಕಳು ಹೇಗಿರಬೇಕು ಎಂಬುದಕ್ಕೆ ಇವರ ಬದುಕೇ ಸಾಕ್ಷಿ. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಅನ್ವರ್ಥದಂತೆ ಬದುಕಿದವರು. ತಾಯಿಯ ಮಾರ್ಗದರ್ಶನ ಸದಾ ಇತ್ತು ಎಂಬುದು ನನ್ನ ಭಾವನೆ ಎಂದರು.

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಮಾತನಾಡಿ, ವೆಂಕಟರಮಣಪ್ಪ ಅವರ ಮನೆ ಬಾಗಿಲಿಗೆ ಹೋಗಿ ಕಾದು ಕುಳಿತು ಸರ್ಕಾರ ರಚಿಸಲು ಕೊರತೆಯಿದ್ದ ಶಾಸಕರನ್ನು ಕರೆತಂದ ಸನ್ನಿವೇಶ ವಿವರಿಸಿದರು. ಚನ್ನಮ್ಮ ಅವರೊಂದಿಗಿನ ಒಡನಾಟ ಹಾಗೂ ಅವರ ಅನ್ನದ ಋಣದ ಬಗ್ಗೆ ಸ್ಮರಿಸಿದರು.

ಬಿಜೆಪಿ ಸದಸ್ಯ ವಿಜಯೇಂದ್ರ, ಜೆಡಿಎಸ್‌ನ ಸುರೇಶ್ ಬಾಬು, ಜಿ.ಟಿ.ದೇವೇಗೌಡ, ಸುರೇಶ್ ಗೌಡ, ಸಚಿವರಾದ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ, ಶರಣ್‌ಪ್ರಕಾಶ್ ಪಾಟೀಲ್‌, ಎಚ್.ಸಿ.ಬಾಲಕೃಷ್ಣ, ಶಿವರಾಜ್‌ ತಂಗಡಗಿ, ನರೇಂದ್ರಸ್ವಾಮಿ, ಕಾಂಗ್ರೆಸ್ ಸದಸ್ಯರಾದ ಕೆ.ಎನ್‌.ರಾಜಣ್ಣ, ಸಿ.ಎಸ್‌.ನಾಡಗೌಡ ಸೇರಿ ಹಲವರು ಮಾತನಾಡಿದರು.

ಸರ್ಕಾರದ ನಿರ್ಧಾರಕ್ಕೆ ಮೆಚ್ಚುಗೆ:

ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಬಿಜೆಪಿಯ ಸುರೇಶ್‌ಗೌಡ, ಜೆಡಿಎಸ್‌ನ ಸುರೇಶ್‌ ಬಾಬು ಸೇರಿದಂತೆ ಹಲವರು ಚನ್ನಮ್ಮ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಿದ ಸರ್ಕಾರದ ನಿರ್ಧಾರಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೇಲ್ಮನೆಯಲ್ಲಿ ಗಣ್ಯರಿಗೆ ಸಂತಾಪ:

ಕಳೆದ ಅಧಿವೇಶನದಿಂದ ಈಚೆಗೆ ಅಗಲಿದ ಮಾಜಿ ಸಚಿವ ರಾಮಚಂದ್ರಗೌಡ, ಸಚಿವರಾಗಿದ್ದ ಡಿ.ಸುಧಾಕರ್‌, ಪತ್ರಕರ್ತ, ಮಾಜಿ ಸಂಸದ ಎಚ್‌.ಹನುಮಂತಪ್ಪ, ಪತ್ರಕರ್ತ, ಲೇಖಕ ಡಾ। ಎಸ್‌.ಆರ್‌.ರಾಮಸ್ವಾಮಿ, ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್‌, ಬಹುಭಾಷಾ ಗಾಯಕಿ ಎಸ್‌.ಜಾನಕಿ ಸೇರಿದಂತೆ 13 ಗಣ್ಯರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ವಿಧಾನಪರಿಷತ್‌ ಸ್ಮರಿಸಿ, ಸಂತಾಪ ವ್ಯಕ್ತಪಡಿಸಿತು.

ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಸಂತಾಪ ಸೂಚನೆ ಮಂಡಿಸಿ, ಮಾಜಿ ಸಚಿವ, ವಿಧಾನ ಪರಿಷತ್‌ ಮಾಜಿ ಸದಸ್ಯ ರಾಮಚಂದ್ರಗೌಡ, ಮಾಜಿ ಸಚಿವರಾದ ಡಿ.ಸುಧಾಕರ್‌, ವೆಂಕಟರಣಪ್ಪ, ಸಿ.ವೀರಣ್ಣ, ಮಾಜಿ ಸಂಸದ ಎಚ್‌.ಹನುಮಂತಪ್ಪ, ಲೇಖಕ, ಸಾಮಾಜಿಕ ಕಾರ್ಯಕರ್ತ ಡಾ. ಎಸ್‌.ಆರ್‌. ರಾಮಸ್ವಾಮಿ, ಖ್ಯಾತ ಗಾಯಕಿಯರಾದ ಆಶಾ ಬೋಂಸ್ಲೆ, ಸಾಹಿತಿ, ರಂಗಭೂಮಿ ಕಲಾವಿದ ರಾಮಚಂದರ್‌ ಬೈಕಂಪಾಡಿ, ತೂಗು ಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ। ಗಿರೀಶ್‌ ಭಾರದ್ವಾಜ್‌, ಖಾತ್ಯ ಗಾಯಕಿ ಎಸ್‌.ಜಾನಕಿ, ಲೇಖಕಿ ಸಿ.ಎನ್‌.ಮುಕ್ತಾ, ಪುರಾತತ್ವ ಶಾಸ್ತ್ರಜ್ಞ ಪ್ರೊ.ಎ.ವಿ.ನರಸಿಂಹಮೂರ್ತಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರುಗಳು ಸಲ್ಲಿಸಿದ ಸೇವೆ, ಕೊಡುಗೆಗಳನ್ನು ಸ್ಮರಿಸಿಕೊಂಡರು.

ಸಭಾಪತಿ ಮಂಡಿಸಿದ ಸಂತಾಪ ಸೂಚನೆ ಅನುಮೋದಿಸಿ, ನೂತನ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ಸಿ.ಟಿ.ರವಿ, ಪಿ.ಎಚ್‌.ಪೂಜಾರ್‌, ಕೆ.ಎಸ್‌.ನವೀನ್‌, ರಘು ಕೌಟಿಲ್ಯ, ಜೆಡಿಎಸ್‌ನ ಟಿ.ಎ.ಶರವಣ, ಎಸ್‌.ಎಲ್‌.ಬೋಜೇಗೌಡ, ಕಾಂಗ್ರೆಸ್‌ನ ಐವನ್‌ ಡಿಸೋಜಾ, ಬಲ್ಕೀಸ್‌ ಬಾನು, ಶಿವಣ್ಣ, ಉಮಾಶ್ರೀ, ತಿಪ್ಪಣ್ಣಪ್ಪ ಕಮಕನೂರು ಅವರು ಅಗಲಿದ ಗಣ್ಯರ ಸೇವೆಗಳ ಗುಣಗಾನ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ರಿವರ್ಣಮಯವಾಗಿ ಕಂಗೊಳಿಸಿದ ಬಳ್ಳಾರಿ ನಗರ
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಸ್ಮರಿಸಿ ರಾಜು: ಕುರಡಗಿ