ಅರಣ್ಯ ಭೂಮಿ ಸರ್ವೇ, ಬರ ಪರಿಸ್ಥಿತಿ, ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ತಮ ಕೈಗೊಳ್ಳಲು ಅಧಿಕಾರಿಗಳಿಗೆ ಸಿಎಂ ಸೂಚನೆ
ರೆವಿನ್ಯೂ ಮತ್ತು ಅರಣ್ಯ ಭೂಮಿ ಗುರುತಿಸುವ ವಿಚಾರದಲ್ಲಿ ಆಗುತ್ತಿರುವ ತೊಂದರೆ ಹಾಗೂ ಗೊಂದಲಗಳನ್ನು ಪರಿಹರಿಸಲು ಎರಡೂ ಇಲಾಖೆಯ ಜಂಟಿ ಸರ್ವೇ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿ ಅಕ್ರಂಪಾಷರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರೆವಿನ್ಯೂ ಸಮಸ್ಯೆ ರಾಜ್ಯ ಮಟ್ಟದಲ್ಲೂ ಇರುವುದರಿಂದ ವಿಧಾನಸೌಧದಲ್ಲಿ ಪ್ರತ್ಯೇಕ ಉನ್ನತ ಮಟ್ಟದ ಸಭೆ ಕರೆಯುತ್ತೇನೆ. ಅಲ್ಲಿಯವರೆಗೂ ಜಿಲ್ಲೆಯಲ್ಲಿ ಅರಣ್ಯ ಭೂಮಿ ಒತ್ತುವರಿಗಾಗಿ ಯಾರನ್ನೂ ತೆರವುಗೊಳಿಸಬಾರದು ಎಂದು ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಜಿಲ್ಲಾಧಿಕಾರಿಗೆ ಸ್ಪಷ್ಟ ಸೂಚನೆ ನೀಡಿದರು.ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ? ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ನೀರು ನೀಡಲಾಗುತ್ತಿದೆ? ಎಂದು ಜಿಲ್ಲಾಧಿಕಾರಿಗೆ ಸಿಎಂ ಪ್ರಶ್ನಿಸಿ, ಇತರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದಾಗ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅವಕಾಶ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮಲದ ಗುಂಡಿಗೆ ಮಕ್ಕಳನ್ನು ಇಳಿಸಿ ಶುಚಿಗೊಳಿಸಿದ ಪ್ರಕರಣದಲ್ಲಿ ಮೂವರನ್ನು ಮಾತ್ರ ಜೈಲಿಗೆ ಕಳುಹಿಸಲಾಗಿದೆ, ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳನ್ನು ಏಕೆ ಬಂಧಿಸಿಲ್ಲ? ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಸಿಎಂ ,ಅವರನ್ನು ತಕ್ಷಣ ಬಂಧಿಸಿ ಎಂದು ಸೂಚಿಸಿದರು
ಈ ಘಟನೆ ಇಡೀ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಒಂದು ಪಾಠ, ಯಾವುದೇ ಕಾರಣಕ್ಕೂ ಇದು ಮರುಕಳಿಸಬಾರದು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರಲ್ಲದೆ, ಎಲ್ಲಾ ಹೋಬಳಿಗಳಲ್ಲೂ ಇರುವ ವಸತಿ ಶಾಲೆಗಳಲ್ಲಿ ಆಯಾ ಹೋಬಳಿಗಳಲ್ಲಿರುವ ವಸತಿ ಶಾಲೆಗಳಿಗೆ ಸೇರುವಂತೆ ಇರುವ ಗೊಂದಲ ಬಗೆಹರಿಸುವಂತೆ ಸೂಚಿಸಿದರು.
ಸಾರಾಯಿ ಬೇಡ,ವಸತಿ ಶಾಲೆ ಬೇಕು
ಎಲ್ಲಾ ಜಾತಿ-ಧರ್ಮದವರಿಗೂ ಆಧ್ಯತೆ ನೀಡಬೇಕು
ಕೋಲಾರ ಅಪರಾಧ ಮುಕ್ತ ಜಿಲ್ಲೆಯಾಗಬೇಕು ಕೋಲಾರ ಜಿಲ್ಲೆಯಲ್ಲಿ ಅಪರಾಧಗಳು ಹೆಚ್ಚಳವಾದರೆ ನಾನು ಸಹಿಸಲ್ಲ, ಕೋಲಾರ ಅಪರಾಧ ಮುಕ್ತ ಆಗಬೇಕು. ಚಾಳಿಬಿದ್ದ ಆರೋಪಿಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಇತರೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣರಿಗೆ ಸೂಚಿಸಿದರು.
ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ಕೋಲಾರಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರದ ಹೊರವಲಯದ ಟಮಕಾದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಆಗಮಸಿದಾಗ ಸಚಿವ ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸೇರಿದಂತೆ ಕೋಲಾರ ಜಿಲ್ಲೆಯ ಶಾಸಕರು ಸಿದ್ದರಾಮಯ್ಯರನ್ನು ಸ್ವಾಗತಿಸಿದರು, ನಂತರ ಅಲ್ಲಿಂದ ಕಾರಿನ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು.
೨ ಗಂಟೆ ತಡವಾಗಿ ಆಗಮಿಸಿದ ಸಿಎಂಕೋಲಾರದ ಜಿಲ್ಲಾಡಳಿತ ಕಚೇರಿಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ೧೧ ಗಂಟೆಗೆ ನಿಗದಿಯಾಗಿದ್ದ ಕೆ.ಡಿ.ಪಿ.ಸಭೆ ಯು ೨ ಗಂಟೆ ತಡವಾಗಿ ೧ ಗಂಟೆಗೆ ಪ್ರಾರಂಭವಾಯಿತು.
ಸಭೆಯ ಪ್ರಾರಂಭದಲ್ಲಿಯೇ ಸಿಎಂ ಸಿದ್ದರಾಮಯ್ಯನವರು ಇಲಾಖಾ ಅಧಿಕಾರಿಗಳನ್ನು ಬಿಟ್ಟು ಮಾಧ್ಯಮದವರಿಗೆ ಪ್ರವೇಶವಿಲ್ಲ, ಪೋಟೋಗಳನ್ನು ತೆಗೆದುಕೊಂಡು ನಿರ್ಗಮಿಸಿ, ಸಭೆಯ ನಂತರ ನಿಮ್ಮನ್ನು ಭೇಟಿಯಾಗುತ್ತೇನೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದರು. ಅದಕ್ಕೆ ಪತ್ರಕರ್ತರು, ಬೇರೆ ಜಿಲ್ಲೆಗಳಲ್ಲಿ ಅನುಮತಿಸುತ್ತಾರೆ. ಕೋಲಾರದಲ್ಲೇನು ವಿಶೇಷ? ಎಂದು ಪ್ರಶ್ನಿಸಿದಾಗ, ಸಿದ್ದರಾಮಯ್ಯ ಹಾಗೂ ಪತ್ರಕರ್ತರ ನಡುವೆ ವಾಗ್ವಾದ ನಡೆದು ಕೊನೆಗೆ ಪತ್ರಕರ್ತರು ಗೊಣಗಾಡುತ್ತಲೇ ಸಭೆಯಿಂದ ಹೊರ ಹೋಗಬೇಕಾದ ಪರಿಸ್ಥಿತಿ ಒದಗಿ ಬಂತು. ಈ ಮಧ್ಯೆ ಸಿದ್ದರಾಮಯ್ಯ ತಾಳ್ಮೆಯಿಂದ ಪದೇ ಪದೇ ಪ್ಲೀಸ್ ಎಂಬ ಪದ ಬಳಿಸುತ್ತಲೇ ಇದ್ದರೂ ಸರ್ಕಾರದ ಪಾರದರ್ಶಕತೆ ಆಡಳಿತದ ಬಗ್ಗೆ ಟೀಕಾ ಪ್ರಹಾರವಾಯಿತು.ಈ ಮಧ್ಯೆ ಸಂಸದ ಎಸ್.ಮುನಿಸ್ವಾಮಿಯವರು, ಪತ್ರಕರ್ತರು ಸಭೆಯಲ್ಲಿ ಭಾಗಿಯಾದರೆ ಏನು ಸಮಸ್ಯೆಯೆಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಅದಕ್ಕೆ ಸಿದ್ದರಾಮಯ್ಯ, ‘ಮುನಿಸ್ವಾಮಿ ನಿನಗೆ ಗೊತ್ತಾಗುವುದಿಲ್ಲ ಸುಮ್ಮನೇ ಕೂತುಕೊ’ ಎಂದಾಗ ಸಂಸದರು ತಟಸ್ಥರಾದ ಘಟನೆ ನಡೆಯಿತು.