ಕನ್ನಡ ಉಳಿಸಿ ಬೆಳೆಸಲು ಪಣ ತೊಡಿ: ತಹಸೀಲ್ದಾರ್‌ ಉಮಾಕಾಂತ ಹಳ್ಳೆ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಶಹಾಪುರ ನಗರದ ಕನ್ಯಾಕೋಳೂರು ಅಗಸಿ ಬಳಿ ಕರ್ನಾಟಕ ಸಂಭ್ರಮದ ಕನ್ನಡ ರಥ ಯಾತ್ರೆ ಸ್ವಾಗತಕ್ಕೆ ವಿವಿಧ ಕಲಾತಂಡಗಳ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಮೈಸೂರು ರಾಜ್ಯ ಕರ್ನಾಟಕ ಎಂದು ಮರುನಾಮಕರಣವಾಗಿ ನ.1ಕ್ಕೆ 50 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ್ದ ಕರ್ನಾಟಕ ಸಂಭ್ರಮದ ರಥ ಯಾತ್ರೆಗೆ ಕನ್ಯಾಕೋಳೂರು ಅಗಸಿಯಲ್ಲಿ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್, ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಶಾಲಾ ಮಕ್ಕಳು ಬರಮಾಡಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ತಹಸೀಲ್ದಾರ್ ಉಮಾಕಾಂತ ಹಳ್ಳೆ, ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಮಕ್ಕಳ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಆಗಬೇಕು. ಮನೆಯಲ್ಲಿ ನಮ್ಮ ಮಾತೃಭಾಷೆಗೆ ಹೆಚ್ಚು ಒಲವುಳ್ಳ ಪರಿಸರವಿರುವಂತೆ ನೋಡಿಕೊಳ್ಳಬೇಕು. ಹೃದಯದ ಭಾಷೆ ಕನ್ನಡವನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬ ಕನ್ನಡಿಗ ಪಣತೊಡಬೇಕು ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್, ಕನ್ನಡ ಭಾಷೆ ಬೆಳೆಸಿ, ಅಭಿವೃದ್ಧಿಪಡಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವುದು ಬಹುದೊಡ್ಡ ಸವಾಲಾಗಿದೆ. ಈ ಆಧುನಿಕ ಯುಗದಲ್ಲಿ ನಾಡಿನ ಜನರು ತಮ್ಮ ಭಾಷಾ ಸ್ವಾಭಿಮಾನ ತೊರೆದು ಅನ್ಯ ಭಾಷೆಗಳತ್ತ ವಾಲುತ್ತಿದ್ದಾರೆ. ಈ ಕಾರಣಕ್ಕೆ ಪ್ರತಿಯೊಬ್ಬರೂ ಕನ್ನಡ ಭಾಷೆ ಉಳಿಸಿ, ಬೆಳೆಸುವ ಜವಾಬ್ದಾರಿ ನಿಭಾಯಿಸುವಂತೆ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ್ ಹೊಸಮನಿ, ಜಗತ್ತಿನ ಜ್ಞಾನಗಳೆಲ್ಲ ಇಂಗ್ಲಿಷ್‌ನಲ್ಲಿಯೇ ಇರುವುದೆಂಬ ಭ್ರಮೆಯಿಂದ ನಾವು ಹೊರಬರಬೇಕಾಗಿದೆ ಎಂದರು.

ಹಿರಿಯ ಪತ್ರಕರ್ತ ನಾರಾಯಣಚಾರ್ಯ ಸಗರ್, ಕನ್ನಡಪರ ಸಂಘಟನೆಗಳ ಮುಖಂಡರಾದ ಭೀಮಣ್ಣ ಶಖಾಪುರ, ಮೌನೇಶ ಹಳಿಸಗರ, ಬಸವರಾಜ್ ಸಿನ್ನೂರ, ವೆಂಕಟೇಶ್ ಬೋನೆರ್, ಮಲ್ಲನಗೌಡ ರಾಯಚೂರು, ಅಬ್ದುಲ್ ಹಾದಿಮನಿ, ಶರಣು ಕಾಡಮಗೇರಾ, ಸೋಪಣ್ಣ ಸಗರ್, ರೇವಣಸಿದ್ದಯ್ಯ ಡೋಂಗಿಮಠ ಸೇರಿ ವಿವಿಧ ಇಲಾಖೆ ನೌಕರರು, ಶಾಲಾ ಮಕ್ಕಳು ಹಾಗೂ ಕನ್ನಡಪರ ಸಂಘಟನೆ ಮುಖಂಡರು ಇದ್ದರು.

Share this article