ಕಲ್ಯಾಣ ಕರ್ನಾಟಕ ಆರ್ಯ ಹೋರಾಟ ಸಮಿತಿ ತೀವ್ರ ಅಸಮಾಧಾನಕನ್ನಡಪ್ರಭ ವಾರ್ತೆ ಕಲಬುರಗಿ
ಇದರಲ್ಲಿ ಪಕ್ಷದ ಹಿರಿಯ ಮುಖಂಡ, ಉಪಾಧ್ಯಕ್ಷರಾಗಿದ್ದ ಮಾಲೀಕಯ್ಯ ಗುತ್ತೇದಾರ್ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಲ್ಯಾಣ ಕರ್ನಾಟಕ ಆರ್ಯ ಹೋರಾಟ ಸಮಿತಿಯು ತೀವ್ರ ಅಸಮಾಧಾನ ಹೊರಹಾಕಿದ್ದಲ್ಲದೆ ಈ ಬೆಳವಣಿಗೆಯನ್ನು ಕಟುವಾಗಿ ಖಂಡಿಸಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ಹಿಂದುಳಿದ ವರ್ಗಗಳ ಹಿರಿಯ ನಾಯಕರಾಗಿ ಬೆಳೆದ ಮತ್ತು ಆರು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ ಹಿರಿಯ ಮುತ್ಸದ್ದಿ ನಾಯಕನನ್ನು ಬಿಜೆಪಿಯ ನೂತನ ಟೀಮ್ ನಲ್ಲಿ ಸೇರ್ಪಡೆಗೊಳಿಸದಿರುವುದು ಮತ್ತು ಅವರಿಗೆ ಈ ವರೆಗೆ ಯಾವುದೇ ಉನ್ನತ ಸ್ಥಾನ ನೀಡದಿರುವುದು ನೋವಿನ ಸಂಗತಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮಾಜದ ಹಿರಿಯ ಮುಂದಾಳುವನ್ನು ಚುನಾವಣೆಗಾಗಿ ಮಾತ್ರ ಬಳಸಿಕೊಂಡು ಕೈಬಿಟ್ಟ ಬಿಜೆಪಿ ತಂತ್ರ ಇದು ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ವೆಂಕಟೇಶ್ ಕಡೇಚೂರ್ ತೀವ್ರವಾಗಿ ಖಂಡಿಸಿದ್ದಾರೆ.ಕಳೆದ ಲೋಕಸಭಾ ಚುನಾವಣೆಯ ವೇಳೆ ಮಾಲೀಕಯ್ಯನವರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹಗಲಿರುಳು ದುಡಿದು ಗೆಲ್ಲಿಸಿದರಲ್ಲದೆ ಪಕ್ಷದ ಸಂಘಟನೆಗಾಗಿ ತನ್ನೆಲ್ಲ ಪ್ರಯತ್ನ ಮಾಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಕ್ತಿ ತುಂಬಿದ್ದರು. ಇಂತಹ ಹಿರಿಯ ಮುಂದಾಳು ಮಾಲೀಕಯ್ಯನವರನ್ನು ಕಡೆಗಣನೆ ಮಾಡಿದ ಪಕ್ಷದ ತಪ್ಪು ನಿರ್ಧಾರವಾಗಿದೆ . ಇನ್ನು ಮೂರು ತಿಂಗಳಲ್ಲಿ ಲೋಕಸಭಾ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಈ ಭಾಗದ ಹಿರಿಯ ಹಿಂದುಳಿದ ನಾಯಕರೊಬ್ಬರನ್ನು ಪಕ್ಷವು ನಡೆಸಿಕೊಂಡ ರೀತಿ ಶೋಭೆ ತರುವಂತದ್ದಲ್ಲ.
ಪಕ್ಷವು ಕೂಡಲೇ ಮಾಲೀಕಯ್ಯ ಗುತ್ತೇದಾರ್ ಅವರಿಗೆ ಸೂಕ್ತ ಸ್ಥಾನಮಾನವನ್ನು ನೀಡಿ ಗೌರವಯುತವಾಗಿ ನಡೆಸಿಕೊಂಡರೆ ಉತ್ತಮ. ಇಲ್ಲವಾದರೆ ಕಲ್ಯಾಣ ಕರ್ನಾಟಕ ಭಾಗದ ಆರ್ಯ ಈಡಿಗ ಸಮುದಾಯವು ಮಾಲೀಕಯ್ಯನವರು ಕೈಗೊಳ್ಳುವ ನಿರ್ಧಾರಕ್ಕೆ ಪೂರ್ಣ ಬೆಂಬಲ ನೀಡಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಕಡೇಚೂರ್ ಅವರು ಎಚ್ಚರಿಸಿದ್ದಾರೆ.