ಎಲ್ಲ ಕಾಲೇಜುಗಳಲ್ಲಿ ಯುವನಿಧಿ ನೋಂದಣಿಗೆ ವಿಶೇಷ ಅಭಿಯಾನ ನಡೆಸಿ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ರಾಜ್ಯ ಸರ್ಕಾರದ ಮಹತ್ವದ ಯುವನಿಧಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಆಯೋಜಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಯುವನಿಧಿ ಯೋಜನೆ ಕುರಿತು ಜಿಲ್ಲೆಯ ತಹಸೀಲ್ದಾರ್‌ ಹಾಗೂ ಜಿಲ್ಲೆಯ ಎಲ್ಲಾ ಪದವಿ, ಡಿಪ್ಲೊಮಾ ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ಮಾತನಾಡಿದರು.

ಜಿಪಂ ಸಭಾಂಗಣದಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಾಪ್ರಭು

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯ ಸರ್ಕಾರದ ಮಹತ್ವದ ಯುವನಿಧಿ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಆಯೋಜಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳನ್ನು ನೋಂದಣಿ ಮಾಡುವಂತೆ ಜಿಲ್ಲಾಧಿಕಾರಿ ದಿವ್ಯಾಪ್ರಭು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಯುವನಿಧಿ ಯೋಜನೆ ಕುರಿತು ಜಿಲ್ಲೆಯ ತಹಸೀಲ್ದಾರ್‌ ಹಾಗೂ ಜಿಲ್ಲೆಯ ಎಲ್ಲಾ ಪದವಿ, ಡಿಪ್ಲೊಮಾ ಕಾಲೇಜು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿ ಮಾತನಾಡಿದರು. 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡಿ, 2023 ತೇರ್ಗಡೆಯಾದ ಮತ್ತು ಫಲಿತಾಂಶ ಪ್ರಕಟಗೊಂಡ 180 ದಿನ ಅಥವಾ 6 ತಿಂಗಳ ಒಳಗಡೆ ಕೆಲಸ ದೊರೆಯದ ನಿರುದ್ಯೋಗಿ ಅರ್ಹ ಪದವೀಧರರಿಗೆ ₹3000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ₹1,500 ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ ಜೋಡಣೆಯ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಲು, ಜಿಲ್ಲೆಯ ಕಾಲೇಜುಗಳು ಪ್ರಾಂಶುಪಾಲರು ವಿಶೇಷ ಅಭಿಯಾನ ನಡೆಸಿ ಅಗತ್ಯ ಸಹಕಾರ ನೀಡಬೇಕು. ನೋಂದಣಿ ಅಭಿಯಾನಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಅಭಿಯಾನಕ್ಕೆ ಕರ್ನಾಟಕ ಒನ್ ಸಿಬ್ಬಂದಿ ನಿಯೋಜಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಯುವನಿಧಿ ಕಾರ್ಯಕ್ರಮದಡಿ ನಿರುದ್ಯೋಗ ಭತ್ಯೆಯ ವಿತರಣಾ ಸಮಾರಂಭವನ್ನು ಜನವರಿ 12ರಂದು ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದು, ಈ ಸಮಾರಂಭಕ್ಕೆ ಚಿತ್ರದುರ್ಗ ಜಿಲ್ಲೆಯಿಂದ 5 ಸಾವಿರ ಫಲಾನುಭವಿಗಳನ್ನು ಕಳುಹಿಸಿಕೊಡ ಲಾಗುತ್ತದೆ. ಹಾಗಾಗಿ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವನಿಧಿ ಯೋಜನೆಗೆ ಅರ್ಹ ಫಲಾನುಭವಿಗಳು ನೋಂದಣಿ ಆಗಬೇಕು. ಯುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಸರೋಜಾ ಮಾತನಾಡಿ, ವಿಶ್ವವಿದ್ಯಾನಿಲಯದ ಅಂತಿಮ ಪದವಿ ವಿದ್ಯಾರ್ಥಿಗಳ ವಿವರವನ್ನು ನ್ಯಾಡ್‍ಗೆ ಅಪ್‍ಲೋಡ್ ಮಾಡಲಾಗಿದ್ದು, ನ್ಯಾಡ್‍ಗೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಸಮಸ್ಯೆ ಪರಿಹರಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಗೋಪಾಲರೆಡ್ಡಿ, ದಾವಣಗೆರೆ ವಿಶ್ವವಿದ್ಯಾಲಯ ನ್ಯಾಡ್ ನೋಡಲ್ ಅಧಿಕಾರಿ ಪ್ರೊ.ಅನುಪ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲೆಯ ತಹಸೀಲ್ದಾರ್ ಗಳು , ಜಿಲ್ಲೆಯ ಪದವಿ ಕಾಲೇಜುಗಳ ಹಾಗೂ ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು ಇದ್ದರು.

Share this article