ಲಿಂಗತ್ವ ಅಲ್ಪಸಂಖ್ಯಾತರು, ಮಾಜಿ ದೇವದಾಸಿಯರ ಸಮೀಕ್ಷೆಗೆ ಜಿಲ್ಲಾಡಳಿತ ನಿರ್ಧಾರ

KannadaprabhaNewsNetwork |  
Published : Nov 21, 2024, 01:05 AM IST
ಸ | Kannada Prabha

ಸಾರಾಂಶ

ಮಹಿಳೆಯರ ಅಹಾಯಕತೆ ಹೋಗಲಾಡಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಒದಗಿಸಲು ಅವರ ಸಮೀಕ್ಷೆ ಕಾರ್ಯ ಅಗತ್ಯವಿದೆ.

ಬಳ್ಳಾರಿ: ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ಮಾಜಿ ದೇವದಾಸಿಯರ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರಿಂದ ನನೆಗುದಿಗೆ ಬಿದ್ದಿದ್ದ ಸಮೀಕ್ಷೆ ಕಾರ್ಯಕ್ಕೆ ಮರುಜೀವ ಬಂದಿದೆ.

ನಗರದಲ್ಲಿ ಬುಧವಾರ ಜರುಗಿದ ಚೇತನಾ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಾಜಿ ದೇವದಾಸಿ ಪುನರ್ವಸತಿ ಯೋಜನೆಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಮೀಕ್ಷೆ ಹಿನ್ನೆಲೆಯಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೆ, ಮಹಿಳೆಯರ ಅಹಾಯಕತೆ ಹೋಗಲಾಡಿಸಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಒದಗಿಸಲು ಅವರ ಸಮೀಕ್ಷೆ ಕಾರ್ಯ ಅಗತ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಕೋಶ ರಚಿಸಿ:

ದಮನಿತ ಮಹಿಳೆಯರ ಅಸಹಾಯಕತೆ ಹೋಗಲಾಡಿಸುವುದರ ಜೊತೆಗೆ ಅವರ ಜೀವನದ ಮಟ್ಟ ಸುಧಾರಣೆ ತರಬೇಕಾದ ಅಗತ್ಯವಿದೆ. ಜಿಲ್ಲಾ ಮಟ್ಟದಲ್ಲಿ ಸಲಹಾಕೋಶ ರಚಿಸಬೇಕು. ಇದರ ಮುಖಾಂತರ ಜಿಲ್ಲೆಯಲ್ಲಿರುವ ತೃತೀಯ ಲಿಂಗಿಗಳನ್ನು ಗುರುತಿಸಿ, ಗುರುತಿನ ಚೀಟಿ ನೀಡುವುದು, ಸರ್ಕಾದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ 1070 ಲಿಂಗತ್ವ ಅಲ್ಪಸಂಖ್ಯಾತರಿದ್ದು, ಚೇತನಾ ಯೋಜನೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ಸಮಾಜದ ತುಳಿತಕ್ಕೆ ಹಾಗೂ ಶೋಷಣೆಗೆ ಒಳಗಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ಅವರ ಜೀವನೋಪಾಯಕ್ಕಾಗಿ ಆದಾಯೋತ್ಪನ್ನಕರ ಚಟುವಟಿಕೆ ನಡೆಸಲು ಸರ್ಕಾರದಿಂದ ₹30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಾಜಿ ದೇವದಾಸಿ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್‌ಗಳಲ್ಲಿ ಸಾಲ-ಸೌಲಭ್ಯ ನೀಡಬೇಕು. ₹2 ಲಕ್ಷದವರೆಗೆ ಯಾವುದೇ ಶೂರಿಟಿ (ಜಾಮೀನು) ಇಲ್ಲದೇ ಲೋನ್ ವಿತರಣೆಗೆ ಅವಕಾಶವಿದೆ. ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಮತ್ತು ಮಾಜಿ ದೇವದಾಸಿ ಮಹಿಳೆಯರ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಲಾಲಪ್ಪ, ಸಿಡಿಪಿಒ ಅಧಿಕಾರಿಗಳು, ಸೌಖ್ಯ ಬೆಳಕು ಸೇವಾ ಸಂಸ್ಥೆ, ವಿಮುಕ್ತಿ ಸಂಸ್ಥೆ, ಸಂಗಮ ಸಂಸ್ಥೆ, ಪ್ರಗತಿ ಸೇವಾ ಸಂಸ್ಥೆ ಮತ್ತು ವೈಆರ್‌ಜಿಕೆ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 2007-08 ರ ಸಮೀಕ್ಷೆ ಪ್ರಕಾರ ಒಟ್ಟು 4288 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಲಾಗಿದೆ. ಅದರಲ್ಲಿ ಒಟ್ಟು 4043 ಮಾಜಿ ದೇವದಾಸಿ ಮಹಿಳೆಯರು ಪ್ರತಿ ತಿಂಗಳು ₹2000ನಂತೆ ಮಾಸಾಶನ ಪಡೆಯುತ್ತಿದ್ದಾರೆ. ಇನ್ನುಳಿದ 245 ಮಾಜಿ ದೇವದಾಸಿ ಮಹಿಳೆಯರಿಗೆ ಮಾಶಾಸನ ಬರುತ್ತಿಲ್ಲ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ