ಗುಡಿಸಲು, ಶೆಡ್‌ಗಳಲ್ಲಿ ವಾಸಿಸುವವರ ಸರ್ವೇ ಮಾಡಿ ವಸತಿ ಸೌಲಭ್ಯ ಕಲ್ಪಿಸಿ-ಪಲ್ಲವಿ ಜಿ.

KannadaprabhaNewsNetwork | Published : Feb 6, 2025 11:46 PM

ಸಾರಾಂಶ

ಜಿಲ್ಲೆಯಲ್ಲಿ ಗುಡಿಸಲು ಹಾಗೂ ಶೆಡ್‌ಗಳಲ್ಲಿ ವಾಸಿಸುವ ಅಲೆಮಾರಿ ಕುಟುಂಬಗಳ ಸರ್ವೇ ಮಾಡಿ, ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೂಚನೆ ನೀಡಿದರು.

ಹಾವೇರಿ: ಜಿಲ್ಲೆಯಲ್ಲಿ ಗುಡಿಸಲು ಹಾಗೂ ಶೆಡ್‌ಗಳಲ್ಲಿ ವಾಸಿಸುವ ಅಲೆಮಾರಿ ಕುಟುಂಬಗಳ ಸರ್ವೇ ಮಾಡಿ, ಅವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಯಾದ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಹಾಗೂ ಸಮಾಲೋಚನೆ ಸಭೆ ನಡೆಸಿದ ಅವರು, ಸಾಮಾಜಿಕ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು. ಸರ್ಕಾರದ ಸೌಲಭ್ಯಗಳನ್ನು ಅಧಿಕಾರಿಗಳು ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ 75 ಮಕ್ಕಳಿಗೆ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ನೀಡಿದ ಕುರಿತು ಮಾಹಿತಿ ಸಲ್ಲಿಸಲಾಗಿದೆ. ಆದರೆ ಶೇ.10ರಷ್ಟು ಮೀಸಲಾತಿ ಅನುಸಾರ ಇನ್ನೂ ಹೆಚ್ಚಿನ ಮಕ್ಕಳು ಪ್ರವೇಶ ಸಿಗಬೇಕಾಗಿತ್ತು. ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಯೋಜನೆ ಮಾಹಿತಿ ಕೊರತೆ ಕಾರಣವಾಗಿದೆ. ಹಾಗಾಗಿ ವಸತಿ ಶಾಲೆಗಳ ಪ್ರವೇಶದಲ್ಲಿ ಶೇ.10 ರಷ್ಟು ಮೀಸಲಾತಿ ಇರುವ ಕುರಿತು ಸಮುದಾಯದವರಿಗೆ ಮಾಹಿತಿ ನೀಡಬೇಕು. ಶಾಲೆಗಳಿಗೆ ಅರ್ಜಿ ಆಹ್ವಾನಿಸುವ ಮೊದಲು ಜಿಲ್ಲೆಯಲ್ಲಿ ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಸಮುದಾಯ ಮಕ್ಕಳಿಗೆ ಮೊದಲು ಶಿಕ್ಷಣ ಸಿಗುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಸಹಿ ರಹಿತರ ಸರ್ವೇಮಾಡಿ:ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತ ಕುಟುಂಬಗಳ ಸಂಖ್ಯೆ 565 ಎಂದು ತಿಳಿಸಲಾಗಿದೆ. ಆದರೆ ಈ ಪೈಕಿ ವಸತಿ ರಹಿತ ಹಾಗೂ ನಿವೇಶನ ರಹಿತರ ಪಟ್ಟಿ ಮಾಹಿತಿ ಬೇರೆ ಬೇರೆಯಾಗಿರಬೇಕು. ಸರ್ವೇ ಮಾಡಿದರೆ ಇನ್ನೂ ಹೆಚ್ಚಿನ ಕುಟುಂಬ ಸಿಗಬಹುದು. ರಟ್ಟಿಹಳ್ಳಿ ಪಟ್ಟಣದ ಸರ್ವೇ ನಂ.152ರ 1.33 ಎಕರೆ ಜಮೀನನ್ನು ಅಲೆಮಾರಿ ಸಮುದಾಯದ ಸಿಂಧೋಳಿ ಜನಾಂಗದವರಿಗೆ ನಿವೇಶನ ನೀಡಲು ಗುರುತಿಸಲಾಗಿದೆ. ಈ ಕಾರ್ಯ ವೇಗವಾಗಿ ಆಗಬೇಕು. ಹಾಗಾಗಿ ಜಿಲ್ಲೆಯಲ್ಲಿ ನಿವೇಶನ ರಹಿತ ಹಾಗೂ ವಸತಿ ರಹಿತರ ಸರ್ವೇ ಮಾಡಿ ನಿಗಮಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ನಾಮನಿರ್ದೇಶಿತರ ಸದಸ್ಯರು ತಮ್ಮ ತಾಲೂಕಿಗೆ ಅಷ್ಟೇ ಸೀಮಿತರಾಗದೇ ಪೂರ್ಣ ಜಿಲ್ಲೆಯಲ್ಲಿರುವ ಅಲೆಮಾರಿ ಸಮುದಾಯ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಕೆಲಸಮಾಡಬೇಕು. ಸಮುದಾಯದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸಮಾಡಬೇಕು ಎಂದು ಸಲಹೆ ನೀಡಿದರು. ವಿವಿಧ ಯೋಜನೆಗಳಡಿ ಅಲೆಮಾರಿ ಸಮುದಾಯ ಫಲಾನುಭವಿಗಳಿಗೆ ಸಾಲ ಸೌಲಭ್ಯ ದೊರೆಯುವಂತಾಗಬೇಕು. ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಲ ಕಾಲಕ್ಕೆ ಜಿಲ್ಲಾ ಮಟ್ಟದ ಸಭೆ ಆಯೋಜನೆ ಮಾಡಬೇಕು. ನಿಗಮದ ಯೋಜನೆಗಳ ಕುರಿತು ಅಲೆಮಾರಿ, ಬುಡಕಟ್ಟುಗಳು ಮತ್ತು ಆದಿವಾಸಿ ಹಟ್ಟಿ ಹಾಡಿಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದರು.ಡಂಬೂರಮತ್ತೂರ ಗ್ರಾಮದಲ್ಲಿ ಸುಮಾರು 75 ವರ್ಷಗಳಿಂದ 45 ಶಿಳ್ಳೆಕ್ಯಾತರ ಕುಟುಂಬಗಳು ಕೆರೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅವರಿಗೆ ಹಕ್ಕುಪತ್ರ ಇಲ್ಲ ಹಾಗೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮದ ಸರ್ವೇ ನಂ.26ರಲ್ಲಿ ಸರ್ಕಾರದ 22 ಎಕರೆ ಜಮೀನಲ್ಲಿ ಇವರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು ಹಾಗೂ ಸರ್ಕಾರದ ಯೋಜನೆಗಳು ಅವರಿಗೆ ತಲುಪುವಂತಾಗಬೇಕು ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರು ಜಿಲ್ಲೆಯಲ್ಲಿರುವ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಜನಸಂಖ್ಯೆ, ವಿವಿಧ ಯೋಜನೆಗಳಡಿ ಸೌಲಭ್ಯ ಪಡೆದ ಫಲಾನುಭವಿಗಳ ಮಾಹಿತಿಯನ್ನು ಸಭೆಗೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಮಮತಾ ಹೊಸಗೌಡ್ರ ಇತರರು ಇದ್ದರು.ಟೆಂಟ್ ಮುಕ್ತ ಕರ್ನಾಟಕ ನಿಗಮದ ಗುರಿ: ಸ್ವಾತಂತ್ರ‍್ಯ ಬಂದು 78 ವರ್ಷಗಳಾದರೂ ದೇಶ ಹಾಗೂ ರಾಜ್ಯ ಮೂಲೆಗಳಲ್ಲಿ ಅಲೆಮಾರಿ ಜನಾಂಗ ಇಂದಿಗೂ ನೆಲೆ ಮತ್ತು ಮೂಲ ಸೌಕರ್ಯವಿಲ್ಲದೆ ಪರದಾಡುತ್ತಿದೆ. ಅವರಿಗೆ ನಿವೇಶನ ಮತ್ತು ಮನೆ ಸೌಲಭ್ಯ ಕಲ್ಪಿಸುವ ಮೂಲಕ ಟೆಂಟ್ ಮುಕ್ತ ಕರ್ನಾಟಕ ನಿಗಮದ ಗುರಿಯಾಗಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ. ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ವಂಚಿತವಾಗಿರುವುದು ನೋವಿನ ಸಂಗತಿಯಾಗಿದೆ. ತಮ್ಮದೇ ಕಲೆ, ಸಂಸ್ಕೃತಿ, ವೃತ್ತಿ ಮಾಡಿಕೊಂಡು ಬದುಕಿತ್ತಿರುವ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವಾಗಬೇಕಿದೆ ಎಂದರು. ಈಗಾಗಲೇ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಲೆಮಾರಿ ಜನಾಂಗದ ಕುಂದು ಕೊರತೆಗಳನ್ನು ಆಲಿಸಿದ್ದೇನೆ. ಉಳಿದ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಮಾರ್ಚ್ 12ರೊಳಗೆ ಅಲೆಮಾರಿ ಜನಾಂಗದ ಸ್ಥಿತಿಗತಿ ಕುರಿತು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದು ಹೇಳಿದರು.ಧ್ವನಿ ಇಲ್ಲದ, ಅವಕಾಶ ವಂಚಿತರಾದ ಅಲೆಮಾರಿಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ. ಅಹವಾಲುಗಳನ್ನು ಸ್ವೀಕರಿಸಿ ಕಾಲಮಿತಿಯಲ್ಲಿ ಪರಿಹಾರ ಕಲ್ಪಿಸಲು ಅಧಿಕಾರಿಗಳು ಮಾತೃ ಹೃದಯದಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಅಲೆಮಾರಿ ಜನಾಂಗದ ಮಕ್ಕಳಿಗೆ ಪ್ರವೇಶ ಪರೀಕ್ಷೆ ರಹಿತವಾಗಿ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಡಂಬೂರಮತ್ತೂರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಮಾರು 75 ವರ್ಷಗಳಿಂದ 45 ಶಿಳ್ಳೆಕ್ಯಾತರ ಕುಟುಂಬಗಳು ಕೆರೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅವರಿಗೆ ಹಕ್ಕುಪತ್ರ ಇಲ್ಲ ಹಾಗೂ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಗ್ರಾಮದ ಸರ್ವೇ 26 ರಲ್ಲಿ ಸರ್ಕಾರದ 22 ಎಕರೆ ಜಮೀನಿನಲ್ಲಿ ಇವರಿಗೆ ಮನೆ ನಿರ್ಮಾಣಕ್ಕೆ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳು ಜಮೀನು ನೀಡುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ನಿಗಮಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದಕುಮಾರ ಏಕಲವ್ಯ ಇತರರು ಉಪಸ್ಥಿತರಿದ್ದರು.

Share this article