ಹುಬ್ಬಳ್ಳಿ: ಅತ್ಯಾಚಾರಕ್ಕೆ ಯತ್ನ, ಕೊಲೆಯಾದ ಬಾಲಕಿ ಮನೆಗೆ ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಹೊರರಾಜ್ಯಗಳ ಕಾರ್ಮಿಕರ ಸಮೀಕ್ಷೆ ನಡೆಸಬೇಕು. ಡ್ರಗ್ ಮಾಫಿಯಾವನ್ನು ಮೂಲದಿಂದಲೇ ಕಿತ್ತೆಸೆಯಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆ ಇದಾಗಿದೆ. ಇಂತಹ ಘಟನೆ ನಡೆಯಬಾರದಿತ್ತು. ಇದರಿಂದ ನನಗೆ ತೀವ್ರ ದುಃಖವಾಗಿದೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಮನೆ ಕೊಡಿಸುವ ಜವಾಬ್ದಾರಿ ನನ್ನದು ಎಂದು ಶಾಸಕರು ಭರವಸೆ ನೀಡಿದರು. ಅಲ್ಲದೆ, ಕುಟುಂಬಕ್ಕೆ ₹25 ಲಕ್ಷ ಪರಿಹಾರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಈ ಹಿಂದೆ ನೇಹಾ ಹಿರೇಮಠ ಮತ್ತು ಅಂಜಲಿ ಕೊಲೆಯಾದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಇಂತಹ ಪ್ರಕರಣ ನಡೆಯುತ್ತಿರಲಿಲ್ಲ. ಬಾಲಕಿ ಕೊಲೆಯಾದ ಸಂದರ್ಭದಲ್ಲಿ ಆರೋಪಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದೆವು. ಪೊಲೀಸರು ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಆರೋಪಿ ಮೃತಪಟ್ಟಿದ್ದಾನೆ ಎಂದ ಅವರು, ಪೊಲೀಸ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮೀಕ್ಷೆ ನಡೆಸಿ: ರಾಜ್ಯಕ್ಕೆ ಹೊರರಾಜ್ಯದಿಂದ ಬರುವ ಕಾರ್ಮಿಕರ ಕುರಿತಂತೆ ಕಾರ್ಮಿಕ ಹಾಗೂ ಪೊಲೀಸ್ ಇಲಾಖೆ ಸಮೀಕ್ಷೆ ನಡೆಸಬೇಕು. ಇದಕ್ಕೆ ಸೂಕ್ತ ಕಾಯ್ದೆ ರೂಪಿಸಿ ಹೊರರಾಜ್ಯದಿಂದ ಬರುವವರ ಆಧಾರ್ ಕಾರ್ಡ್ ಸೇರಿದಂತೆ ಅಗತ್ಯ ಮಾಹಿತಿಯನ್ನು ಸರ್ಕಾರ ಕಲೆ ಹಾಕಬೇಕು. ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸಿ ಸಂಪೂರ್ಣ ಡಾಟಾ ಸಂಗ್ರಹಿಸುವ ಕೆಲಸವಾಗಬೇಕು. ಎನ್‌ಕೌಂಟರ್‌ಗೆ ಬಲಿಯಾದ ಆರೋಪಿಯ ವಿಳಾಸ ಪತ್ತೆಯಾಗಿಲ್ಲ. ಕೇವಲ ಬಿಹಾರ ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆದರೆ, ಆತನ ವಿವರವಾದ ಮಾಹಿತಿಯೇ ಲಭ್ಯವಾಗಿಲ್ಲ. ಸೂಕ್ತ ಕಾಯಿದೆ ಮತ್ತು ಸಮೀಕ್ಷೆ ನಡೆದರೆ, ಇಂತಹ ಘಟನೆಗಳು ನಡೆದಾಗ ಅವರ ಪತ್ತೆಗೆ ಪೂರಕವಾಗಲಿವೆ ಎಂದು ತಿಳಿಸಿದರು.ಡ್ರಗ್ಸ್‌ನ್ನು ಮೂಲ ಬೇರು ಸಹಿತ ಕಿತ್ತೆಸೆಯುವ ಕೆಲಸ ಮಾಡಬೇಕು. ಅದರಂತೆ ರಾಜ್ಯ ಸರ್ಕಾರವು ಪ್ರತ್ಯೇಕ ಟಾಸ್ಕ್‌ಪೋರ್ಸ್ ರಚಿಸಿ ಡ್ರಗ್ಸ್ ಮಾಫಿಯಾಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಕೆಎಂಸಿಆರ್‌ಐಗೆ ಭೇಟಿ ನೀಡಿದ ಶಾಸಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಅಧಿಕಾರಿ ಅನ್ನಪೂರ್ಣಾ ಹಾಗೂ ಇತರ ಪೊಲೀಸರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಆರೋಪಿ ತಪ್ಪಿಸಿಕೊಳ್ಳುವ ವೇಳೆ ಅನ್ನಪೂರ್ಣಾ ತೋರಿದ ದಿಟ್ಟತನ ತೋರಿಸಿದ್ದನ್ನು ಕೊಂಡಾಡಿದ ಅವರು ಅನ್ನಪೂರ್ಣಾ ಕರ್ತವ್ಯ ನಿಷ್ಠೆಗೆ ಸಲಾಂ ಹೇಳಿದರು.ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯ್ಕ್, ಸಿದ್ದು ಮೊಗಲಿಶೆಟ್ಟರ್, ಪಾಲಿಕೆ ಸದಸ್ಯರಾದ ಸಂತೋಷ್ ಚವ್ಹಾಣ್, ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ, ಬಿಜೆಪಿ ವಕ್ತಾರ ರವಿ ನಾಯಕ, ಬೀರಪ್ಪ ಖಂಡೇಕರ್, ರಘು ಧಾರವಾಡಕರ, ಚಂದ್ರಿಕಾ ಮೇಸ್ತ್ರಿ ರೂಪಾ ಶೆಟ್ಟಿ, ಅಶೋಕ್ ವಾಲ್ಮೀಕಿ, ಮೇಘನಾ ಶಿಂಧೆ, ವಿಶ್ವನಾಥ ಪಾಟೀಲ, ಚನ್ನು ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು.