ತೆಂಗಿನಲ್ಲಿ ಕಪ್ಪು ತಲೆ ಹುಳು ಬಾಧೆ ಬಗ್ಗೆ ಸಮೀಕ್ಷೆ ನಡೆಸಿ

KannadaprabhaNewsNetwork |  
Published : Aug 30, 2025, 01:00 AM IST
      ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತೆಂಗಿನ ಕಪ್ಪು ತಲೆ ಹುಳು ಬಾಧೆ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯಲ್ಲಿ ತೆಂಗು ಬೆಳೆಯಲ್ಲಿ ಕಂಡು ಬಂದಿರುವ ಕಪ್ಪು ತಲೆ ಹುಳುವಿನ ಬಾಧೆ ಕುರಿತು ಸರ್ಕಾರದ ಆದೇಶದನ್ವಯ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ತೆಂಗು ಬೆಳೆಯಲ್ಲಿ ಕಂಡು ಬಂದಿರುವ ಕಪ್ಪು ತಲೆ ಹುಳುವಿನ ಬಾಧೆ ಕುರಿತು ಸರ್ಕಾರದ ಆದೇಶದನ್ವಯ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತೆಂಗಿನ ಕಪ್ಪು ತಲೆ ಹುಳು ಬಾಧೆ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತೆಂಗು ಬೆಳೆಯಲ್ಲಿ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧಿತ ಪ್ರದೇಶಗಳ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಸಮೀಕ್ಷೆಗಾಗಿ ತಂತ್ರಾಂಶದ ಜ್ಞಾನ ಹೊಂದಿರುವ ಖಾಸಗಿ ನಿವಾಸಿ (ಪಿಆರ್)ಗಳನ್ನು ಆಯ್ಕೆ ಮಾಡಿಕೊಂಡು ಬೆಳೆ ಸಮೀಕ್ಷೆ ಮಾದರಿಯಲ್ಲಿ ಈ ಗೌರನೆನ್ಸ್ ಇಲಾಖೆ ಅಭಿವೃದ್ಧಿ ಪಡಿಸಿರುವ ಆಪ್ ಮೂಲಕ ಸಮೀಕ್ಷೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಕಂದಾಯ ಇಲಾಖೆ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮನ್ವಯದೊಂದಿಗೆ ಸಮೀಕ್ಷಾ ಕಾರ್ಯವನ್ನು ನಡೆಸಬೇಕು. ಸಮೀಕ್ಷಾ ಕಾರ್ಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಸಮೀಕ್ಷೆಯ ಮೇಲ್ವಿಚಾರಣೆ ಮಾಡಿ ಸಮೀಕ್ಷಾ ವರದಿಯನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಮಂಡಿಸಿ ದೃಢೀಕೃತ ವರದಿಯನ್ನು ಸಮಿತಿಯ ಅಭಿಪ್ರಾಯ ಹಾಗೂ ಶಿಫಾರಸಿನೊಂದಿಗೆ ತೋಟಗಾರಿಕೆ ನಿರ್ದೇಶನಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದರು.

ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಮೂಲಕ ರೈತರಿಗೆ ಕಪ್ಪು ತಲೆ ಹುಳುವಿನ ಬಾಧೆ ತಡೆಯುವ ಹಾಗೂ ಹತೋಟಿಗೆ ತರುವ ಸಲಹಾ ಕ್ರಮಗಳು, ಜಾಗೃತಿಗಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಅರಿವು ಕಾರ್ಯಕ್ರಮವನ್ನು ಆಯೋಜಿಸಬೇಕು. ತಾಂತ್ರಿಕ ಸಿಬ್ಬಂದಿ ನೆರವಿನೊಂದಿಗೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ರೋಗ ಬರುವ ಮುನ್ನವೇ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸ ವ್ಯಾಪಕವಾಗಿ ಆಗಬೇಕು ಎಂದರು.

ಕಪ್ಪು ತಲೆ ಹುಳುವಿನ ಬಾಧೆ ತೀವ್ರತೆ ಇರುವ ಪ್ರದೇಶಗಳಲ್ಲಿ ವಿಶೇಷ ಗಮನಹರಿಸಬೇಕು. ತಹಸೀಲ್ದಾರ್‌ರು ಸಮೀಕ್ಷಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮುತುವರ್ಜಿವಹಿಸಿ ನಿಖರ ಮಾಹಿತಿ ವರದಿಗೆ ತೋಟಗಾರಿಕೆ ಇಲಾಖೆಗೆ ಸಹಕರಿಸಬೇಕು. ವ್ಯವಸ್ಥಿತವಾಗಿ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಬೇಕು. ಜಿಲ್ಲೆಯ ತೆಂಗು ಬೆಳೆಗಾರರು ಸಮೀಕ್ಷೆಗೆ ಆಗಮಿಸುವ ಖಾಸಗಿ ನಿವಾಸಿಗಳಿಗೆ ತಾಕು ಪರಿಶೀಲಿಸಲು ಅಗತ್ಯ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮನವಿ ಮಾಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ನರೇಶ್ ಮಾತನಾಡಿ, ಕಪ್ಪು ತಲೆ ಹುಳು ಮತ್ತು ಬಿಳಿ ನೊಣದ ಕುರಿತ ಕೀಟದ ಜೀವನ ಚಕ್ರ, ಹಾನಿಯ ಲಕ್ಷಣಗಳು ಮತ್ತು ನಿಯಂತ್ರಣದ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹಾಜರಿದ್ದ ಪ್ರಗತಿಪರ ರೈತರು ಬೆಳೆಗಾರರು ಕಪ್ಪು ತಲೆ ಹುಳುವಿನ ತೊಂದರೆ ಹಾಗೂ ಸಮೀಕ್ಷೆ ಸಂಬಂಧ ತಮ್ಮ ಅಭಿಪ್ರಾಯ ಸಲಹೆಗಳನ್ನು ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ಎಲ್. ಶಿವಪ್ರಸಾದ್, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ರೇಣುಕಪ್ರಸಾದ್, ತಹಸೀಲ್ದಾರ್‌ರಾದ ಬಸವರಾಜು, ಗಿರಿಜಾ, ಜಯಪ್ರಕಾಶ್, ಚೈತ್ರ, ನಯನ, ತಾಲೂಕು ತೋಟಗಾರಿಕೆ ಸಹಾಯಕ ನಿರ್ದೇಶಕರು, ಪ್ರಗತಿಪರ ರೈತರಾದ ಮಹೇಶ್, ಎಸ್.ಪಿ. ಸಂಗಮೇಶ್, ಸತೀಶ್, ಎಂ.ಎಸ್. ಅಶೋಕ್, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ