''ಲೀಲಾವ್ ಖರಾಬ್'' ಜಮೀನು ಅಕ್ರಮ ಪರಭಾರೆ ತನಿಖೆ ನಡೆಸಿ

KannadaprabhaNewsNetwork |  
Published : Nov 13, 2026, 01:45 AM IST
  12 ಜೆ.ಜಿ.ಎಲ್.1)‌   ಜಗಳೂರು ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ತಾಲೂಕು ಬಂಜಾರ ಸಮುದಾಯದ ಮುಖಂಡರು, ವಕೀಲರಾದ ಉಮೇಶ್‌ನಾಯ್ಕ ಇತರರು ಮಾತನಾಡಿದರು. | Kannada Prabha

ಸಾರಾಂಶ

ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿಯ ಬಗ್ಗೇನಹಳ್ಳಿ ಗ್ರಾಮದ ವ್ಯಾಪ್ತಿಯ ಸಾರ್ವಜನಿಕ ಉದ್ದೇಶದ ''ಲೀಲಾವ್ ಖರಾಬ್'' ಸರ್ಕಾರಿ ಜಮೀನನ್ನು ಅಕ್ರಮ ದಾಖಲೆಗಳ ಮೂಲಕ ಖಾಸಗಿಯವರಿಗೆ ಶುದ್ಧ ಕ್ರಯಕ್ಕೆ ಮಾರಾಟ ಮಾಡಲಾಗಿದೆ. ಜಿಲ್ಲಾಡಳಿತವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ತಾಲೂಕು ಬಂಜಾರ ಸಮುದಾಯದ ಮುಖಂಡ, ವಕೀಲ ಉಮೇಶ್‌ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.

- ಜಿಲ್ಲಾಡಳಿತಕ್ಕೆ ಜಗಳೂರು ತಾಲೂಕು ಬಂಜಾರ ಸಮುದಾಯ ಮುಖಂಡರ ಆಗ್ರಹ

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಬಿಳಿಚೋಡು ಹೋಬಳಿಯ ಬಗ್ಗೇನಹಳ್ಳಿ ಗ್ರಾಮದ ವ್ಯಾಪ್ತಿಯ ಸಾರ್ವಜನಿಕ ಉದ್ದೇಶದ ''''ಲೀಲಾವ್ ಖರಾಬ್'''' ಸರ್ಕಾರಿ ಜಮೀನನ್ನು ಅಕ್ರಮ ದಾಖಲೆಗಳ ಮೂಲಕ ಖಾಸಗಿಯವರಿಗೆ ಶುದ್ಧ ಕ್ರಯಕ್ಕೆ ಮಾರಾಟ ಮಾಡಲಾಗಿದೆ. ಜಿಲ್ಲಾಡಳಿತವು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಜಮೀನನ್ನು ಮರಳಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ತಾಲೂಕು ಬಂಜಾರ ಸಮುದಾಯದ ಮುಖಂಡ, ವಕೀಲ ಉಮೇಶ್‌ ನಾಯ್ಕ ಗಂಭೀರ ಆರೋಪ ಮಾಡಿದ್ದಾರೆ.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳ ಬಹಿರಂಗಪಡಿಸಿ ಮಾತನಾಡಿದ ಅವರು, ಬಗ್ಗೇನಹಳ್ಳಿ ಸರ್ವೆ ನಂಬರ್ 13ರಲ್ಲಿ ಒಟ್ಟು 97.28 ಎಕರೆ ಲೀಲಾವ್ ಖರಾಬ್ ಜಮೀನಿದೆ. ಕಾನೂನಿನ ಪ್ರಕಾರ ಈ ಜಮೀನನ್ನು ಉಳುಮೆಗೆ ನೀಡುವಂತಿಲ್ಲ. ಬದಲಾಗಿ ಸರ್ಕಾರಿ ಶಾಲೆ, ಕೆರೆ, ವಸತಿ ಶಾಲೆ ಅಥವಾ ಕೆಐಎಡಿಬಿ ಲೇಔಟ್‌ನಂತಹ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದರು.

​ಆರು ಜನರ ಪಹಣಿ ರದ್ದು, ಒಬ್ಬರಿಗೆ ವಿನಾಯಿತಿ:

1987ರಲ್ಲಿ ಈ ಪೈಕಿ 28 ಎಕರೆ ಜಮೀನನ್ನು ಏಳು ಜನರಿಗೆ ಮಂಜೂರು ಮಾಡಲಾಗಿತ್ತು. ಆದರೆ, ಲೀಲಾವ್ ಖರಾಬ್ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುವಂತಿಲ್ಲ ಎಂಬ ಉಚ್ಚ ನ್ಯಾಯಾಲಯದ ಆದೇಶ ಹಿನ್ನೆಲೆ ಏಳು ಜನರ ಪೈಕಿ ಆರು ಮಂದಿಯ ಪಹಣಿಗಳನ್ನು (ಆರ್‌ಟಿಸಿ) ರದ್ದುಗೊಳಿಸಲಾಗಿತ್ತು. ಆದರೆ, ದೇವಿಕೆರೆ ಗ್ರಾಮದ ಗುರುಸಿದ್ದಪ್ಪ ತಂದೆ ಸಂಗಪ್ಪ ಎಂಬುವರ ಹೆಸರಿನಲ್ಲಿದ್ದ 4 ಎಕರೆ ಜಮೀನಿನ ಪಹಣಿ ಮಾತ್ರ ರದ್ದಾಗದೇ ಉಳಿದಿತ್ತು ಎಂದು ತಿಳಿಸಿದರು.

ಈ ಕುರಿತು 2020ರಲ್ಲಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು. 2022ರಲ್ಲಿ ಅಂದಿನ ಎಸಿ ಮಮತಾ ಹೊಸಗೌಡರ್ ಆದೇಶದ ಮೇರೆಗೆ ದಾಖಲೆಗಳನ್ನು ಪರಿಶೀಲಿಸಿದಾಗ ಮೂಲ ಕಡತಗಳು ಲಭ್ಯವಿರಲಿಲ್ಲ. ಮಂಜೂರಾತಿ ದಿನಾಂಕದಿಂದ ಯಾರೂ ಸ್ವಾಧೀನಾನುಭವದಲ್ಲಿ ಇಲ್ಲದಿರುವುದು ಸ್ಥಳ ತನಿಖೆಯಿಂದ ದೃಢಪಟ್ಟಿತ್ತು. ಹೀಗಾಗಿ, ಈ 28 ಎಕರೆ ಜಮೀನನ್ನು ಸರ್ಕಾರದ ವಶದಲ್ಲೇ ಕಾಯಂ ಆಗಿ ಉಳಿಸಿಕೊಳ್ಳುವಂತೆ ಜಗಳೂರು ತಹಸೀಲ್ದಾರ್ ಪತ್ರದ ಮೂಲಕ ಸೂಚಿಸಿದ್ದರು ಎಂದು ಮುಖಂಡರು ವಿವರಿಸಿದರು.

ಪೌತಿ ಖಾತೆ ಹೆಸರಿನಲ್ಲಿ ಅಕ್ರಮ ಮಾರಾಟದ ಆರೋಪ:

ಬಗರ್‌ಹುಕುಂ ಸಮಿತಿಯಿಂದ ಅಧಿಕೃತ ಮಂಜೂರಾತಿ ಇಲ್ಲದಿದ್ದರೂ, ಗುರುಸಿದ್ದಪ್ಪ ಅವರ ನಿಧನದ ನಂತರ ಅವರ ಪತ್ನಿ ಲಲಿತಮ್ಮ (ಲಿಲಾವತಿ) ಅವರು ಪೌತಿ ಖಾತೆ ಬದಲಾವಣೆಗಾಗಿ ಎಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಾಮಮಾರ್ಗದ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು, ಹಿಂದಿನ ಉಪವಿಭಾಗಾಧಿಕಾರಿ ದುರ್ಗಾಶ್ರೀ ಅವರಿಂದ ಕಾನೂನುಬಾಹಿರವಾಗಿ ಖಾತೆ ಬದಲಾವಣೆ ಆದೇಶ ಪಡೆಯಲಾಗಿದೆ. ಬಳಿಕ 4 ಎಕರೆ ಜಮೀನನ್ನು 3 ಎಕರೆಗೆ ಸೀಮಿತಗೊಳಿಸಿ ಬೇರೊಬ್ಬರಿಗೆ ಶುದ್ಧ ಕ್ರಯಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಭೇಟಿಗೆ ಒತ್ತಾಯ:

ಬಂಜಾರ ಸಮುದಾಯದ ಮುಖಂಡ ಕೃಷ್ಣಮೂರ್ತಿ ನಾಯ್ಕ್ ಸರ್ಕಾರಿ ಆಸ್ತಿಯನ್ನು ಅಕ್ರಮವಾಗಿ ಪರಭಾರೆ ಮಾಡಿರುವ ಲಲಿತಮ್ಮ ಅವರ ಮಾರಾಟದ ಹಕ್ಕನ್ನು ತಕ್ಷಣವೇ ರದ್ದುಗೊಳಿಸಬೇಕು. ಈ ಖಾತೆ ಬದಲಾವಣೆ ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಲೀಲಾವ್ ಖರಾಬ್ ಜಮೀನನ್ನು ಸರ್ಕಾರಕ್ಕೆ ವಾಪಸ್ ಪಡೆಯಬೇಕು ಎಂದು ಮುಖಂಡರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಂಜಾರ ಸಮುದಾಯದ ಮುಖಂಡ ಅನಂತಮೂರ್ತಿ ನಾಯ್ಕ, ಮಹಾಂತೇಶ್‌ ನಾಯ್ಕ, ವೆಂಕಟೇಶ್‌ ನಾಯ್ಕ ಸೇರಿದಂತೆ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.

- - -

-12ಜೆ.ಜಿ.ಎಲ್.1:

ಸುದ್ದಿಗೋಷ್ಠಿಯಲ್ಲಿ ಬಂಜಾರ ಸಮುದಾಯದ ಮುಖಂಡ ಉಮೇಶ್‌ ನಾಯ್ಕ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌