ಗದಗ: ಜಿಲ್ಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳ ಗ್ರುಪ್ ಬಿ ವೃಂದದ ಹುದ್ದೆಗಳಿಗೆ ಜ.19 ಮತ್ತು 25ರಂದು ಪರೀಕ್ಷೆ ನಡೆಸುತ್ತಿದ್ದು. ಜಿಲ್ಲೆಯಲ್ಲಿ ಪರೀಕ್ಷೆಗಳು ಸುವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ಜರುಗಿಸಬೇಕು ಹಾಗೂ ಪರೀಕ್ಷಾ ಅಕ್ರಮಕ್ಕೆ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು.
ಜಿಲ್ಲೆಯ 9ಪರೀಕ್ಷಾ ಕೇಂದ್ರಗಳಲ್ಲಿ ಜ.19 ಮತ್ತು 25 ರಂದು ಪರೀಕ್ಷೆಗಳು ಜರುಗುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರಗಳು ಇರುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ತ್ರಿಸದಸ್ಯ ಸಮಿತಿ ನೇಮಕ: ಪರೀಕ್ಷೆ ಸುಗಮವಾಗಿ ನಡೆಸಲು ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿ, ಮಾರ್ಗಾಧಿಕಾರಿ ಮತ್ತು ತ್ರಿ-ಸದಸ್ಯ ಸಮಿತಿ ನೇಮಿಸಲಾಗಿದೆ. ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.ವಿಕಲಚೇತನರಿಗೆ ನೆಲಮಹಡಿಯ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯುವ ವ್ಯವಸ್ಥೆಯಾಗಬೇಕು. ಒಟ್ಟಾರೆ ಯಾವುದೇ ಅಕ್ರಮ, ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ಪರೀಕ್ಷೆಯನ್ನು ಯಶಸ್ವಿಯಾಗಿ ಜರುಗಿಸಬೇಕೆಂದು ತಿಳಿಸಿದರು.
ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶ ಹಾಗೂ ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶ ನಿರ್ಬಂಧಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್ ಬಂದು ಮಾಡಲು ಆದೇಶಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆ ನಿರ್ಬಂಧಿಸಿದೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರಹೋಗುವ ನಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿ ನಿಷೇಧಿಸಿದೆ. ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ರೀತಿಯಲ್ಲಿ ವಸ್ತ್ರಧರಿಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಪ್ರಿಸ್ಕಿಂಗ್ ನಡೆಸುವ ಸಿಬ್ಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಾಗುವುದು ಕಡ್ಡಾಯವಾಗಿರುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಸಂಕದ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಶಾಂತಿ ಸುವ್ಯವಸ್ಥೆ, ಪಾರದರ್ಶಕತೆ ಕಾಪಾಡಲು ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಸೇರಿದಂತೆ ಅವಶ್ಯಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳು: ನಗರದ ಕೆ.ಎಲ್.ಇ ಸೊಸೈಟಿಸ್ ಜೆ.ಟಿ.ಕಾಲೇಜ್, ಸಿ.ಎಸ್.ಪಾಟೀಲ ಬಾಲಕರ ಪ್ರೌಢಶಾಲೆ, ಸಿ.ಎಸ್.ಪಾಟೀಲ ಬಾಲಕಿಯರ ಪ್ರೌಢಶಾಲೆ, ವಿ.ಡಿ.ಎಸ್.ಟಿ. ಗಂಡುಮಕ್ಕಳ ಪ್ರೌಢಶಾಲೆ, ವಿ.ಡಿ.ಎಸ್.ಟಿ. ಹೆಣ್ಣುಮಕ್ಕಳ ಸಂಯುಕ್ತ ಪಿಯು ಕಾಲೇಜ್, ಬೆಟಗೇರಿಯ ಎ.ಎಸ್.ಎಸ್.ಕಾಮರ್ಸ್ ಕಾಲೇಜ್, ನಗರದ ಶಾಸ್ತ್ರೀಜಿ ಹೈಸ್ಕೂಲ್, ಮುಳಗುಂದ ರಸ್ತೆಯಲ್ಲಿನ ಸರ್ಕಾರಿ ಪಪೂ ಕಾಲೇಜ್, ಸಿದ್ದಲಿಂಗನಗರದ ಬಸವೇಶ್ವರ ಪ್ರೌಢಶಾಲೆ.