ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರಸ್ತೆಗಳು ಗುಂಡಿಬಿದಿದ್ದು ಸಂಚರಿಸುವ ವಾಹನ ಚಾಲಕರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ರಸ್ತೆ ಗುಂಡಿ ಜೊತೆಗೆ ಅಲ್ಲಲ್ಲಿ ರೈತರು ತಮ್ಮ ಕೃಷಿ ಪಂಪ್ ಸೆಟ್ಟುಗಳಿಗೆ ಪೈಪ್‌ಗಳನ್ನು ಅಳವಡಿಸಿಕೊಳ್ಳಲು ರಸ್ತೆ ಅಗೆದಿರುವುದರಿಂದ ಗುಂಡಿ ಮುಚ್ಚದೆ ತಾಲೂಕು ಲೋಕೋಪಯೋಗಿ ಇಲಾಖೆ ನಿದ್ರೆಗೆ ಜಾರಿದೆ.
ರೈತರು ತಮ್ಮ ಜಮೀನುಗಳ ಅನುಕೂಲಕ್ಕಾಗಿ ಕೃಷಿ ಪಂಪ್ ಪೈಪ್‌ಗಳನ್ನು ಹಾಕಿಕೊಳ್ಳಲು ಅಗೆದ ರಸ್ತೆಯನ್ನು ಮುಚ್ಚುತ್ತಿಲ್ಲ. ಅಥವಾ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೂ ಕ್ರಮ ವಹಿಸುತ್ತಿಲ್ಲ. ಇದರಿಂದ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗುತ್ತಿವೆ.ತಾಲೂಕಿನ ಕಿಕ್ಕೇರಿ ಗಡಿಯ ಚಿಕ್ಕಳಲೆ ಬಳಿ ಮಾತೃಭೂಮಿ ವೃದ್ಧಾಶ್ರಮದ ಜೈಹಿಂದ್ ನಾಗಣ್ಣ ಅವರು ಮುಖ್ಯ ರಸ್ತೆಯಲ್ಲಿ ಫ್ಲೆಕ್ಸ್ ಹಾಕಿ ರಸ್ತೆ ಗುಂಡಿ ಬಗ್ಗೆ ವಾಹನ ಚಾಲಕರಿಗೆ ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಸದರಿ ರಸ್ತೆ ಅಭಿವೃದ್ಧಿಗೆ ನಯಾಪೈಸೆ ಹಣ ನೀಡಲಿಲ್ಲ. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಹೆದ್ದಾರಿ ಅಭಿವೃದ್ಧಿಗೆ ಮುಂದಾಗಿಲ್ಲ. ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸುವಂತೆ ಸಂಸದರು ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಿರಂಗ ಮನವಿ ಪತ್ರ ಸಲ್ಲಿಸಿದ್ದು ಬಿಟ್ಟರೆ ಯಾವುದೇ ಕ್ರಮ ವಹಿಸಿಲ್ಲ.ಹೆದ್ದಾರಿ ಅಭಿವೃದ್ಧಿಗೆ ನೂರಾರು ಕೋಟಿ ರು. ಅನುದಾನ ಬೇಕು. ಸರ್ಕಾರದ ಗ್ಯಾರಂಟಿ ಯೋಜನೆ ಪರಿಣಾಮ ಹಣವಿಲ್ಲದೆ ರಸ್ತೆ ಅಭಿವೃದ್ಧಿಯಾಗಿಲ್ಲ ಎಂದು ಹೇಳಬಹುದು. ಮುಖ್ಯ ರಸ್ತೆಯ ಎರಡೂ ಬದಿಗಳಲ್ಲೂ ಅಲ್ಲಲ್ಲಿ ಮಳೆ ನೀರು ಹರಿದು ಕೊರಕಲು ಉಂಟಾಗಿದೆ. ರಸ್ತೆ ಕೊರಕಲು ಬಿದ್ದಿರುವುದರಿಂದ ಎದುರಿನಿಂದ ಬರುವ ವಾಹನಕ್ಕೆ ದಾರಿ ಮಾಡಿಕೊಡಲು ಪಕ್ಕಕ್ಕೆ ಸರಿದರೆ ವಾಹನಗಳು ಅನಾಹುತಗಳಾಗುತ್ತಿವೆ. ಹಲವು ಬೈಕ್ ಸವಾರರು ಅಪಘಾತಕ್ಕೀಡಾಗಿ ಮನುಷ್ಯ ಜೀವಕ್ಕೂ ಹಾನಿಯಾಗಿದೆ. ರಸ್ತೆ ಕೊರಕಲು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಲು ಕೋಟಿ ಹಣ ಬೇಕಾಗಿಲ್ಲ. ತಾಲೂಕು ಲೋಕೋಪಯೋಗಿ ಇಲಾಖೆ ಕನಿಷ್ಠ ರಸ್ತೆ ಕೊರಕಲು ಮುಚ್ಚಿಸುವುದಕ್ಕೂ ಹಣವಿಲ್ಲವೇ ಎಂಬ ಪ್ರಶ್ನೆ ಪಟ್ಟಣದ ನಾಗರೀಕರನ್ನು ಕಾಡುತ್ತಿದೆ. ಕೆ.ಆರ್.ಪೇಟೆ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ಮೂಲಕ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ನಿತ್ಯ ಸಂಚರಿಸುತ್ತಾರೆ. ಕೂಡಲೇ ಎಚ್ಚೆತ್ತು ರಸ್ತೆ ಬದಿ ಕೊರಕಲು ಮುಚ್ಚಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.- ಬಸವೇಗೌಡ ಬೊಪ್ಪನಹಳ್ಳಿ, ಪಟ್ಟಣದ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರು